ಚಾಮರಾಜನಗರ:
ಗ್ರಾಮದಲ್ಲಿನ ಲಕ್ಷ್ಮಿ ವೇಂಕಟೇಶ್ವರ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು, ಯುವಕರು ಅಂಗಡಿಗೆ ಮುತ್ತಿಗೆ ಹಾಕಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.
ಪ್ರತಿದಿನ ತಮ್ಮ ಪತಿಯರು ದಿನದ ಸಂಪಾದನೆಯನ್ನೆಲ್ಲಾ ಮದ್ಯಕ್ಕೇ ಸುರಿಯುತ್ತಿದ್ದು, ಯುವ ಜನತೆಯೂ ಹಾದಿ ತಪ್ಪುತ್ತಿದೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ.ಬೆಳಗ್ಗೆಯಿಂದಲೇ ಅಂಗಡಿ ಮುಂದೆ ಜಮಾಯಿಸಿ ಬಾರ್ ತೆರವುಗೊಳಿಸುವಂತೆ ಪ್ರತಿಭಟಿಸುತ್ತಿದ್ದು ಪರಿಸ್ಥಿತಿ ಬಿಗಡಾಯಿಸಿದೆ.
ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದು, ಮದ್ಯದಂಗಡಿ ತೆರವುಗೊಳಿಸುವವರೆಗೆ ಕದಲುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಿದ್ದಾರೆ.ಸ್ಥಳಕ್ಕೆ ಬಂದ ಸಿಪಿಐ ಬಾಲಕೃಷ್ಣ ಹಾಗೂ ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದಿದ್ದು, 3 ದಿನದ ಬಳಿಕ ಗ್ರಾಮದ ಮುಖಂಡರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ಶಾಸಕ ನಿರಂಜನ್ಕುಮಾರ್ ನೀಡಿದ್ದಾರೆ ಎನ್ನಲಾಗಿದೆ……