ದೇಶದಲ್ಲಿ ಬಾಲ್ಯವಿವಾಹ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಪದ್ಧತಿಯಾಗಿದ್ದು, ಇದನ್ನು ತೊಡೆದುಹಾಕುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಮರಿಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಬಾಲ್ಯ ವಿವಾಹ ಮುಕ್ತ ಜಿಲ್ಲೆಗಾಗಿ ಸಮಾಲೋಚನಾ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದುಳಿದ ರಾಷ್ಟ್ರಗಳು ಹಾಗೂ ರಾಜ್ಯಗಳಲ್ಲಿ ಬಾಲ್ಯ ವಿವಾಹವನ್ನು ಪೋಷಿಸಿಕೊಂಡು ಬರಲಾಗಿದೆ. ಪುರಾಣಗಳು ಹಾಗೂ ರಾಜರ ಆಳ್ವಿಕೆಯ ಅವಧಿಯಲ್ಲಿ ಬಾಲ್ಯವಿವಾಹಗಳು ಕಂಡುಬರುತ್ತಿದ್ದವು. ಹೆಣ್ಣು ಮಕ್ಕಳನ್ನು ಭೋಗದ ವಸ್ತು ಎಂದು ತಿಳಿದಿರುವ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯು ಹೆಣ್ಣು ಮಕ್ಕಳ ದನಿ, ಸ್ವಾತಂತ್ರೃ ಹಾಗೂ ಅಭಿವ್ಯಕ್ತಿಯನ್ನು ಸತತವಾಗಿ ದಮನ ಮಾಡುತ್ತಾ ಬಂದಿದೆ ಎಂದರು.
ಬಾಲ್ಯ ವಿವಾಹ ಕಾಯ್ದೆ ಜಾರಿಗೆ ಬಂದ ನಂತರ ಇದಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅಲೆಮಾರಿ, ಬುಡಕಟ್ಟು ಹಾಗೂ ಕೆಲ ಹಿಂದುಳಿದ ಜನಾಂಗಗಳಲ್ಲಿ ಇಂದಿಗೂ ಬಾಲ್ಯ ವಿವಾಹಗಳು ಕಂಡುಬರುತ್ತಿವೆ. ಮಕ್ಕಳ ಅಪೌಷ್ಟಿಕತೆ ಹಾಗೂ ಬಾಲ್ಯವಿವಾಹ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ತಿಳಿಸಿದರು…..
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಜಿಲ್ಲೆ ಬಾಲ್ಯ ವಿವಾಹದಲ್ಲಿ 6 ನೇ ಸ್ಥಾನದಲ್ಲಿದೆ. ಬಾಲ್ಯ ವಿವಾಹವನ್ನು ತಡೆಗಟ್ಟಲು ಸರ್ಕಾರಿ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ದಾಖಲಾಗುತ್ತಿರುವ ಪ್ರಕರಣಗಳು ಕಡಿಮೆ. ಹೆಣ್ಣು ಮಕ್ಕಳಿಗೆ ವಿವಾಹ ಮಾಡುವ ಬದಲು ಅವರಿಗೆ ಶಿಕ್ಷಣವನ್ನು ಕೊಡಿಸಿದಾಗ ಅಭಿವೃದ್ಧಿ ಸಾಧ್ಯ. ತಂದೆ, ತಾಯಂದಿರನ್ನು ಹೆದರಿಸುವ ಬದಲು ಅವರ ಮನಸ್ಸನ್ನು ಬದಲಿಸುವ ಕೆಲಸ ಮಾಡಬೇಕು. ಬಾಲ್ಯ ವಿವಾಹ ತಡೆಯುವಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದರು……