Breaking News

ತುಳುನಾಡಿನ ಈ ಪರಶಿವನಿಗೆ ಆಲದ ಮರವೇ ಆಲಯ!

SHARE......LIKE......COMMENT......

ದೈವ ಸನ್ನಿಧಿ:

ಪರಮೇಶ್ವರ ಸದಾ ವಿರಾಗಿ, ಅವನಿಗೆ ಯಾವ ವೈಭೋಗದ ಆಸೆ ಇರುವುದಿಲ್ಲ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಅದಕ್ಕೆ ಉದಾಹರಣೆ ಎನ್ನುವಂತೆ ಇರುವ ಶಿವ ಸನ್ನಿಧಾನವೇ ತುಳುವೇಶ್ವರ.ಸಾವಿರ ವರ್ಷದ ಇತಿಹಾಸವಿರುವ ಈ ತುಳುವೇಶ್ವರನ ವಿಶೇಷವೆದರೆ ಈ ಶಿವಲಿಂಗಕ್ಕೆ ಆಲಯವೇ ಇಲ್ಲ, ಬದಲಿಗೆ ಆಲದ ಮರವೇ ಶಿವ  ಆಲಯವಾಗಿ ಲಿಂಗವನ್ನು ಮಳೆ, ಬಿಸಿಲಿನಿಂದ ರಕ್ಷಿಸುತ್ತಿದೆ.

ಉಡುಪಿ ಜಿಲ್ಲೆ ಪ್ರಮುಖ ತಾಲೂಕು ಕೇಂದ್ರ ಕುಂದಾಪುರದಿಂದ ಸುಮಾರು 6 ಕಿಮೀ ಇರುವ ಐತಿಹಾಸಿಕ ಗ್ರಾಮ ಬಸ್ರೂರ್ನಲ್ಲಿ ಈ ತುಳುವೇಶ್ವರ ಸನ್ನಿಧಾನವಿದೆ. ತುಳುನಾಡು ಎಂದು ಕರೆಯಲ್ಪಡುವ ಕಾಸಗೋಡಿನಿಂದ ಬೈಂದೂರಿನವರೆಗಿನ ಉದ್ದನೆ ಕಡಲ ಕಿನಾರೆಯ ಪ್ರದೇಶದ ತುಳು ಭಾಷಿಕರ ಅಧಿದೇವತೆ ಈ ತುಳುವೇಶ್ವರನಾಗಿದ್ದು ಪ್ರಕೃತಿ ಮತ್ತು ದೈವ ಶಕ್ತಿಯ ಸಂಗಮವಾಗಿ ಉಳಿದಿದೆ.

ಹಿಂದೆ ವಸುಪುರ ಎಂದು ಹೆಸರಾಗಿದ್ದ ಬಸ್ರೂರು ವಿಜಯನಗರ ಮತ್ತು ಅದಕ್ಕೂ ಮುನ್ನಿನ ಕಾಲದಿಂಡ ವ್ಯಾಪಾರಿ ಕೇಂದ್ರವಾಗಿ ಪ್ರಸಿದ್ದಿಯಾಗಿತ್ತು. ಬಾರ್ಕೂರು ಸಂಸ್ಥಾನದಲ್ಲಿ ಪ್ರಮುಖ ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿದ್ದ  ಬಸ್ರೂರು  ಇಂತಹಾ ಊರಿನಲ್ಲಿ ಪ್ರಸಿದ್ದ ಮಹಾಲಿಂಗೇಶ್ವರನ ಸನ್ನಿಧಾನವೂ ಇದ್ದು  ಆಲಯವೇ ಇಲ್ಲದೆ ಮರದ ನಡುವೆಯೇ ಪೂಜಿಸಲ್ಪಡುವ ಈ ತುಳುವೇಶ್ವರ ಶಿವಾಲಯದ ಬಗೆಗೆ ಇನ್ನೂ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲ.

ಇನ್ನು ಶತ ಶತಮಾನಗಳಷ್ಟು ಹಿಂದೆ ಈ ತುಳುವೇಶ್ವರನಿಗೆ ದೇವಾಲಯವಿತ್ತು. ಆದರೆ ಕಾಲದ ಹೊಡೆತಕ್ಕೆ ಸಿಕ್ಕು ಸುಮಾರು 200 ವರ್ಷಗಳ ಹಿಂದೆ ಈ ಪುರಾತನ ದೇವಾಲಯ ಶಿಥಿಲವಾಗಿದೆ. ವಿಶೇಷವೆಂದರೆ ಅನೇಕ ವರ್ಷಗಳ ಹಿಂದೆ ದೇವಾಲಯದ ಗೋಡೆಯ ಬದಿ ಬೆಳೆದ ಆಲದ ಮರವೊಂದು ಇಂದಿಗೂ ಹಾಗೆಯೇ ಇದ್ದು ಶಿವಲಿಂಗದ ಸುತ್ತ ರಕ್ಷಣಾ ಗೋಡೆಯಂತೆ ಆವರಿಸಿದೆ. ಈ ಆಲದ ಮರಕ್ಕೆ ಸುಮಾರು 250  ವರ್ಷಗಳಾಗಿದೆ ಎಂದು ಅಂದಾಜಿಸಲಾಗಿದೆ.

ತುಳುವೇಶ್ವರ ಇತಿಹಾಸ ಕಾಲದಲ್ಲಿ ಸಾಕಷ್ಟು ಪ್ರಸಿದ್ದಿ ಹೊಂದಿದ್ದ ದೇವ ಸನ್ನಿಧಾನವಾಗಿತ್ತು ಎನ್ನಲು ಶಾಸನಾಧಾರಗಳೂ ಇದೆ. ಕ್ರಿಶ 1401ರಲ್ಲಿ ಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರ ದೇವರಿಗೆ ದಾನ ಕೊಟ್ಟಿರುವ ವಿಚಾರ ಬರುತ್ತದೆ, ಬಾರ್ಕೂರು ರಾಜ್ಯಪಾಲ ಬಸವಣ್ಣ ಒಡೆಯನ ಆಳ್ವಿಕೆಯಲ್ಲಿ ಬಸ್ರೂರಿನ ಪಡುವನ ಕೇರಿಯ ಭೂ ಒಡೆತನ ಹೊಂದಿದ್ದ ಪ್ರತಿಷ್ಠಿತ ಮನೆತನದವಳಾದ ತುಳುವಕ್ಕ ಹೆಗ್ಗಡತಿ ತಾನು ನಿರ್ಮಿಸಿದ್ದ ಧರ್ಮಛತ್ರದ ವೆಚ್ಚಕ್ಕೆ ಬೇರೆ ಬೇರೆ ಕಡೆಗಳಲ್ಲಿದ್ದ ಅವಳ ಭೂಮಿಯಿಂದ ಬರುವ ಆದಾಯವನ್ನು ದತ್ತಿ ನೀಡಿದ್ದಳು. ಹಾಗೆ ದತ್ತಿ ನೀಡುವಾಗ ಆಕೆ ತುಳುವೇಶ್ವರ ದೇವರಿಗೆ ಮತ್ತು ಮುಳುಲದೇವಿಗೆ ನೀಡಿದ್ದ ದತ್ತಿ ವಿಚಾರ ಸಹ ಶಾಸನದಲ್ಲಿ ಪ್ರಸ್ತಾಪವಾಗಿದೆ.

ಈ ಸ್ಥಳದಲ್ಲಿ ಶಿವನ ಆಲಯವಿತ್ತು ಎನ್ನಲು ಇನ್ನೂ ದಾಖಲೆಗಳೆಂಬಂತೆ ಶಿವನ ಎದುರಲ್ಲಿ ನಂದಿ ವಿಗ್ರಹವಿದೆ. ಅಲ್ಲದೆ ಮುರಕಲ್ಲಿನಲ್ಲಿ ಕಟ್ಟಿರುವ ಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯ ಶಾಲೆ ಅವಶೀಷಗಳು, ಸೇರಿ ಅನೇಕ ಪ್ರಾಚೀನ ದಾಖಲೆಗಳು ಇಲ್ಲಿ ಸಿಗುತ್ತದೆ. ನಂದಿ ವಿಗ್ರಹವು ಅತ್ಯಂತ ಅಪರೂಪದ ಕೆತ್ತನೆಯಿಂದ ಕೂಡಿದ್ದು ಏಕಶಿಲಾ ವಿಗ್ರಹವು ಪ್ರಾಚೀನ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತದೆ.

ಸುಮಾರು 60 ವರ್ಷಗಳಷ್ಟು ಹಿಂದೆ ನಿಧಿಯಾಸೆಗಾಗಿ ಈ ನಂದಿ ವಿಗ್ರಹವನ್ನು ಕಬ್ಬಿಣದ ಸಲಾಕೆ ಬಳಸಿ ಪೀಠದಿಂದ ಬೇರ್ಪಡಿಸಲು ಯತ್ನ ನಡೆದಿತ್ತು. ಆದರೆ ಅದು ವಿಫಲವಾಗಿತ್ತು. ಅಂದಿನಿಂದಲೂ ನಂದಿಯ ಒಂದು ಭಾಗ ವಾಲಿಕೊಂಡಿರುವುದು, ಮೇಲಕ್ಕೆ ಎದ್ದಿರುವುದನ್ನು ನಾವು ಕಾಣುತ್ತೇವೆ.

ಇಲ್ಲಿನ ಶಿವಲಿಂಗದ ಸುತ್ತಲೂ ಆಲದ ಮರದ ಬಿಳಲುಗಳೇ ರಕ್ಷಣಾ ಪೌಳಿಯಾಗಿದ್ದು ದೇವಾಲಯದ ಪೂರ್ವ ದಿಕ್ಕಿನಿಂದ ಶಿವಲಿಂಗದ ಕಡೆಗೆ ಓರ್ವ ವ್ಯಕ್ತಿ ಪ್ರವೇಶಿಸುವಷ್ಟು ಸ್ಥಳಾವಕಾಶವಿದೆ. ಪಾಣಿಪೀಠದ ಮೇಲಿರುವ   ಶಿವಲಿಂಗವು ಎರಡೂವರೆ ಅಡಿ ಎತ್ತರವಿದೆ.ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿ ಎನ್ನುವ ವೈಷ್ಣವ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದ ವ್ಯಕ್ತಿ ಈ ಶಿವಲಿಂಗವಿದ್ದ ಜಾಗವನ್ನು ಖರೀದಿಸಿದ್ದರು. ಹಾಗೆ ಜಾಗ ಖರೀದಿಸುವಾಗ ಅವರಿಗೆ ಈ ಸ್ಥಳದಲ್ಲಿ ಶಿವಲಿಂಗವಿದೆ ಎನ್ನ್ನುವ ವಿಚಾರ ಸಹ ತಿಳಿದಿರಲಿಲ್ಲ.  ಆದರೆ ಎಂದು ಶಿವನ ಕಾರಣಿಕ ಶಕ್ತಿ ಗೋಚರವಾಯಿತೋ ಅಂದೇ ವಿಠಲ ಕಿಣಿ ತಾವು ಪ್ರತಿನಿತ್ಯ ಆ ಪರಮೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೆ ವಿಠಲ ಕಿಣಿ ಮನೆತನದವರೇ ಈ ತುಳುವೇಶ್ವರನಿಗೆ ನಿತ್ಯ ನೈಮಿತ್ತಿಕ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಇನ್ನು ಈಗ ಶಿವನ ಪೂಜಾ ಕೈಂಕರ್ಯ ನಡೆಸುತ್ತಿರುವ ಕುಟುಂಬಕ್ಕೆ ಶಿವನ ಈ ಪ್ರಾಚೀನ ಸನ್ನಿಧಾನವನ್ನು ಜೀರ್ಣೋದ್ದಾರ ಮಾಡಬೇಕೆಂದು  ಬಯಕೆ ಇದೆ. ಆದರೆ ಹಲವು ಕಡೆ ಪ್ರಶ್ನೆ, ದರ್ಶನಾದಿಗಳನ್ನು ನಡೆಸಿ ಕೇಳಲಾಗಿ ಈ ದೇವಾಲಯ ಜೀರ್ಣೋದ್ದಾರಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ, ಯೋಗಿಯೊಬ್ಬರ ಮೂಲಕ ಈ ದೇವಾಲಯ ಪುನರ್ ಅಭಿವೃದ್ಧಿ ಹೊಂದಲಿದೆ ಎನ್ನುವ ಉತ್ತರ ದೊರಕಿದೆ.

ತುಳುನಾಡಿನ ಬೇರೆಲ್ಲಿಯೂ ‘ತುಳುವೇಶ್ವರ’ ಎನ್ನುವ ದೇವರ ಸನ್ನಿಧಾನವಿಲ್ಲ. ಹೀಗಾಗಿ ಕಾಸರಗೋಡಿನಿಂದ ಪ್ರಾರಂಭವಾಗಿ ಉಡುಪಿ ಜಿಲ್ಲೆ ಬೈಂದೂರಿನ ತನಕದ ತುಳು ಭಾಷಾ ಪ್ರಾಂತಕ್ಕೆ ಈ ಶಿವನು ಅಧಿದೇವತೆಯಾಗಿದ್ದಾನೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಅಲ್ಲದೆ ಕಳೆದ ವರ್ಷಗಳಲ್ಲಿ ಬದಿಯಡ್ಕ, ಧರ್ಮಸ್ಥಳಗಳಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನಕ್ಕೆ ಇದೇ ಸನ್ನಿಧಾನದಲ್ಲಿ ಚಾಲನೆ ನೀಡಲಾಗಿತ್ತು……