ಕಾರವಾರ:
ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗುವ ಎಲ್ಲ ದೂರುಗಳನ್ನು 3 ತಿಂಗಳ ಒಳಗೆ ವಿಲೇವಾರಿ ಮಾಡಲಾಗುವುದು ಎಂದು ಆಯೋಗದ ಸದಸ್ಯ ರೂಪಕ್ ಕುಮಾರ್ ದತ್ತಾ ತಿಳಿಸಿದರು.ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಬಂದ ದೂರುಗಳ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ, ಸೂಚನೆ ನೀಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರು ಬಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. 1 ತಿಂಗಳಲ್ಲಿ ಅವರಿಂದ ಉತ್ತರ ಬಾರದೇ ಇದ್ದಲ್ಲಿ ಸಮನ್ಸ್ ಜಾರಿ ಮಾಡಲಾಗುತ್ತದೆ ಎಂದರು.ಕಾಟಾಚಾರಕ್ಕಾಗಿ ದೂರುಗಳ ವಿಚಾರಣೆ ಮಾಡುವುದು ಬೇಡ. ದೂರುದಾರರಿಗೆ ಸಮಾಧಾನವಾಗುವಂತೆ ಕಾರ್ಯನಿರ್ವಹಿಸಿ. ದೂರಿನಲ್ಲಿ ಸತ್ಯಾಂಶವಿರದಿದ್ದಲ್ಲಿ ಅದನ್ನು ಕಿತ್ತು ಹಾಕಿ ಬಿಡಿ. ಯಾವುದೇ ಅರ್ಜಿಗಳನ್ನು ಬಾಕಿ ಇಡಬೇಡಿ ಎಂದು ಸೂಚಿಸಲಾಗಿದೆ ಎಂದರು.
ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಸಲ್ಲಿಕೆಯಾದ 36 ದೂರುಗಳಲ್ಲಿ 26 ದೂರುಗಳನ್ನು ಮಂಗಳವಾರ ಸಭೆಯಲ್ಲಿ ಪರಿಶೀಲನೆ ಮಾಡಿ, ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣಕಗಳು ಕಡಿಮೆ ಇವೆ.ಅದಕ್ಕೆ ಅರಿವಿನ ಕೊರತೆಯೂ ಇರಬಹುದು ಎಂದರು.
ವಿವಿಧ ಸರ್ಕಾರಿ ಇಲಾಖೆಯಲ್ಲಿ ಹೊರ ಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಮರ್ಪಕ ವೇತನ, ಸೌಲಭ್ಯ ದೊರೆಯದ ಬಗೆಗೆ ದೂರುಗಳು ಬಂದಿದ್ದು, ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಸೂಚಿಸಲಾಗಿದೆ ಎಂದರು…..