Breaking News

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಹರಿದುಬರುತ್ತಿರುವ ಜನಸಾಗರ..!

‘ಅಪ್ಪು’ ಅಂತಿಮ ದರ್ಶನಕ್ಕೆ ಆಗಮಿಸುತ್ತಿರುವ ವಿವಿಧ ಚಿತ್ರರಂಗದ ಗಣ್ಯರು....

SHARE......LIKE......COMMENT......

ಬೆಂಗಳೂರು:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) 46ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕುರುನಾಡಿನ ಕಣ್ಮಣಿ ‘ಅಪ್ಪು’ ಕೊನೆಯುಸಿರೆಳೆದಿದ್ದಾರೆ. ತಮ್ಮ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲವೆಂಬ ಸುದ್ದಿ ತಿಳಿದು ಅವರ ಅಭಿಮಾನಿಗಳು ಆಘಾತಗೊಂಡಿದ್ದಾರೆ. ನಿನ್ನೆಯಿಂದಲೇ ಬೆಂಗಳೂರಿನ ಕಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಾಡಿನ ಮೂಲೆ ಮೂಲೆಯಿಂದ ಬೆಂಗಳೂರಿನತ್ತ ಧಾವಿಸಿ ಬರುತ್ತಿರುವ ಲಕ್ಷಾಂತರ ಅಭಿಮಾನಿಗಳ ದಂಡು ಕಂಠೀರವ ಸ್ಟೇಡಿಯಂ(Kanteerava Stadium)ಗೆ ಭೇಟಿ ನೀಡುತ್ತಿದ್ದು, ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದ್ದು, ನೆಚ್ಚಿನ ನಟನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣಿಸಿರುವ ಪುನೀತ್ ಅವರ ಪಾರ್ಥಿವ ಶರೀರವನ್ನು ನೋಡಿ ಅಭಿಮಾನಿಗಳು ಅಳುತ್ತಿದ್ದಾರೆ.

ಶುಕ್ರವಾರ ರಾತ್ರಿ ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಅವರ ಪಾರ್ಥಿವ ಶರೀರವನ್ನು ತರುತ್ತಲೇ ಅಭಿಮಾನಿಗಳ(Puneeth Rajkumar Fans) ದುಃಖದ ಕಟ್ಟೆ ಸ್ಫೋಟಗೊಂಡಿತ್ತು. ಅಪ್ಪು.. ಅಪ್ಪು… ಪುನೀತಣ್ಣ… ಸಾರ್ ಮತ್ತೆ ಹುಟ್ಟಿ ಬನ್ನಿ ಸಾರ್.. ಹೀಗೆ ಅಭಿಮಾನಿಗಳ ಘೋಷಣೆಗಳು ಮುಗಿಲು ಮುಟ್ಟಿದ್ದವು. ಭಾರೀ ನೂಕುನುಗ್ಗಲಿನಲ್ಲಿಯೇ ಸಾಗಿ ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಅಭಿಮಾನಿಗಳು ಬಸ್, ರೈಲುಗಳ ಮೂಲಕ ಬೆಂಗಳೂರಿಗೆ ಬರುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ತಂಡೋಪತಂಡವಾಗಿ ಅಭಿಮಾನಿಗಳು ಆಗಮಿಸುತ್ತಿದ್ದು, ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಣ್ಣೀರಧಾರೆ ಸುರಿಸುತ್ತಿದ್ದಾರೆ.

ಸ್ಯಾಂಡಲ್ ವುಡ್(Sandalwood)ಸೇರಿದಂತೆ ಭಾರತೀಯ ಚಿತ್ರರಂಗದ ಹಿರಿಯ ನಟ-ನಟಿಯರು, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕ್ರೀಡಾಂಗಣಕ್ಕೆ ಆಗಮಿಸಿ ಅಗಲಿದ ನಟನ ದರ್ಶನ ಪಡೆದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ಮೆಗಾಸ್ಟಾರ್ ಚಿರಂಜೀವಿ ಕೂಡ ಆಗಮಿಸಲಿದ್ದು, ಅಂತಿಮ ದರ್ಶನ ಪಡೆಯಲಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಕೂಡ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ……