Breaking News

‘777 ಚಾರ್ಲಿ’ ಸಿನಿಮಾ ನೋಡಿದ ನಂತರ ವಿತರಿಸಲು ಮುಂದೆ ಬಂದ ಸ್ಟಾರ್ ನಟರು..!

ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿರುವ '777 ಚಾರ್ಲಿ'....

SHARE......LIKE......COMMENT......

ಸಿನಿಮಾ:

ರಕ್ಷಿತ್‌ ಶೆಟ್ಟಿ ಮತ್ತು ನಾಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘777 ಚಾರ್ಲಿ’ ಸಿನಿಮಾ ತನ್ನ ಒಂದು ಟ್ರೇಲರ್‌ನಿಂದ ಭಾರತೀಯ ಚಿತ್ರರಂಗದಲ್ಲಿ ಹಲವರ ಗಮನ ಸೆಳೆದಿದೆ. ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಬೇರೆ ಬೇರೆ ಭಾಷೆಗಳಲ್ಲಿ ಅಲ್ಲಿನ ಖ್ಯಾತ ನಟರು ಇದರ ಬಿಡುಗಡೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ವಿಶೇಷ.

ಮಲಯಾಳಂನಲ್ಲಿ ಪೃಥ್ವಿರಾಜ್‌

ಮಲಯಾಳಂ ಚಿತ್ರರಂಗದ ಸ್ಟಾರ್‌ ನಟ, ನಿರ್ದೇಶಕ, ನಿರ್ಮಾಪಕ ಪೃಥ್ವಿರಾಜ್‌ ಸುಕುಮಾರನ್‌ ‘ಚಾರ್ಲಿ’ ಸಿನಿಮಾವನ್ನು ಮಲಯಾಳಂನಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದ್ದಾರೆ. ‘ಕೆಜಿಎಫ್‌ ಚಾಪ್ಟರ್‌-2’ ಚಿತ್ರವನ್ನು ಸಹ ಪೃಥ್ವಿರಾಜ್‌ ಬಿಡುಗಡೆ ಮಾಡಿದ್ದರು. ಅದು ದೊಡ್ಡ ಯಶಸ್ಸು ಕಂಡಿದೆ. ಕೆಲ ದಿನಗಳ ಹಿಂದೆ ‘ಚಾರ್ಲಿ’ ಸಿನಿಮಾದ ಶೋ ರೀಲ್‌ ನೋಡಿ, ತಮ್ಮ ಕಡೆಯಿಂದ ಏನು ಸಹಾಯ ಬೇಕೋ ಕೇಳಿ ಎಂದಿದ್ದರು. ಇದೀಗ ಅವರ ನಿರ್ಮಾಣ ಸಂಸ್ಥೆಯಿಂದಲೇ ‘ಚಾರ್ಲಿ’ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

ತಮಿಳಿನಲ್ಲಿ ಕಾರ್ತಿಕ್‌ ಸುಬ್ಬರಾಜು

ವಿಭಿನ್ನ ಶೈಲಿಯ ನಿರೂಪಣೆ ಮೂಲಕ ಸ್ಟಾರ್‌ ನಿರ್ದೇಶಕನ ಪಟ್ಟ ಗಳಿಸಿಕೊಂಡಿರುವ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ತಮಿಳು ‘ಚಾರ್ಲಿ’ಯನ್ನು ತಮ್ಮ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದ್ದಾರೆ. ಇವರು ಸಹ ಸಿನಿಮಾ ನೋಡಿ ಮೆಚ್ಚಿ ನಂತರ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.

ತೆಲುಗಿನಲ್ಲಿ ರಾಣಾ

ತೆಲುಗಿನ ಖ್ಯಾತ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ‘ಚಾರ್ಲಿ’ ಸಿನಿಮಾವನ್ನು ಮೆಚ್ಚಿಕೊಂಡು ಕೆಲ ದಿನಗಳ ಹಿಂದೆ ಟ್ವೀಟ್‌ ಮಾಡಿದ್ದರು. ಈಗ ಅವರ ಖ್ಯಾತ ನಿರ್ಮಾಣ ಸಂಸ್ಥೆ ‘ಸುರೇಶ್‌ ಪ್ರೊಡಕ್ಷನ್‌ ಹೌಸ್‌’ನಿಂದ ‘ಚಾರ್ಲಿ’ಯನ್ನು ತೆಲುಗಿನಲ್ಲಿ ರಿಲೀಸ್‌ ಮಾಡುತ್ತಿದ್ದಾರೆ.

ಹಿಂದಿ ಭಾಷೆಯಲ್ಲಿ ಯುಎಫ್‌ಓ ಸಂಸ್ಥೆ ‘ಚಾರ್ಲಿ’ಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಒಟ್ಟಾರೆ ದೇಶದ ಪ್ರಮುಖ ನಿರ್ಮಾಣ ಸಂಸ್ಥೆಗಳ ಮೂಲಕ ‘ಚಾರ್ಲಿ’ ಬಿಡುಗಡೆಯಾಗುತ್ತಿದೆ.

‘ನಮ್ಮ ಸಿನಿಮಾ ಬಿಡುಗಡೆಗೆ ತಡವಾಗಿದೆ ನಿಜ. ಆದರೆ, ಎಲ್ಲಿಯೂ ಕ್ವಾಲಿಟಿ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ಇಷ್ಟು ವರ್ಷ ತೆಗೆದುಕೊಂಡಿದ್ದೇವೆ. ನಮ್ಮ ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಕಂಟೆಂಟ್‌ ಮತ್ತು ಕ್ವಾಲಿಟಿಯನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲರಿಗೂ ಸಿನಿಮಾ ನೋಡಿ ಅನಂತರ ನೀವು ಇದರ ಭಾಗವಾಗಬೇಕಾ ಬೇಡವಾ ಎಂಬುದನ್ನು ನಿರ್ಧರಿಸಿ ಎಂದು ರಕ್ಷಿತ್‌ ಎಲ್ಲರಿಗೂ ಹೇಳಿದ್ದರು. ಅದರಂತೆ ಪ್ರತಿಯೊಬ್ಬರು ಸಿನಿಮಾ ನೋಡಿದ ನಂತರವೇ ನಮ್ಮ ಸಿನಿಮಾವನ್ನು ವಿತರಿಸಲು ಮುಂದೆ ಬಂದಿದ್ದಾರೆ’ ಎಂದು ಹೇಳುತ್ತಾರೆ ನಿರ್ದೇಶಕ ಕಿರಣ್‌ರಾಜ್‌.

ಜೂ.10ರಂದು ಈ ಸಿನಿಮಾ ಎಲ್ಲಾ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ರಾಜ್‌ ಬಿ. ಶೆಟ್ಟಿ, ಸಂಗೀತಾ ಶೃಂಗೇರಿ, ತಮಿಳಿನ ಬಾಬ್ಬಿ ಸಿಂಹ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ‘777 ಚಾರ್ಲಿ’ಗಾಗಿ ನಾನು ಬಹಳಷ್ಟು ರಿಸರ್ಚ್ ಮಾಡಿದ್ದೇನೆ. ಜನರಿಗೆ ಸಿನಿಮಾ ಕನೆಕ್ಟ್ ಆಗಬೇಕು ಎಂಬ ನಿಟ್ಟಿನಲ್ಲಿ ನನ್ನ ಇಡೀ ತಂಡ ಕೆಲಸ ಮಾಡಿದೆ. ರಕ್ಷಿತ್‌ ಶೆಟ್ಟಿ ಮತ್ತು ನನ್ನ ತಂಡದ ಶ್ರಮ, ಸಿನಿಮಾದ ಕ್ವಾಲಿಟಿ ಇತ್ಯಾದಿ ಕಾರಣಗಳಿಂದ ಇಷ್ಟು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ನಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ ಎಂದಿದ್ದಾರೆ ನಿರ್ದೇಶಕ ಕಿರಣ್‌ ರಾಜ್‌……