ಚಿಕ್ಕಮಗಳೂರು:
ಚಳಿಗಾಲ ತೀವ್ರಗೊಳ್ಳುವ ಮುನ್ನವೇ ಜಿಲ್ಲೆಯ ಜನ ಶೀತ, ಕೆಮ್ಮು, ವೈರಾಣು ಜ್ವರಗಳಿಂದ ಬಳಲುತ್ತಿದ್ದಾರೆ. ಇದರಿಂದ ಜಿಲ್ಲಾ, ತಾಲೂಕು ಆಸ್ಪತ್ರೆ ಸೇರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.ಪ್ರತಿದಿನ ರಾಜ್ಯ, ಅಂತಾರಾಜ್ಯದ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರು ಜತೆಗೆ ವಿವಿಧ ವೈರಾಣು ಹೊತ್ತು ತರುತ್ತಿರುವುದು ಸ್ಥಳೀಯರು ಆಸ್ಪತ್ರೆಗಳ ಎಡತಾಕುವಂತಾಗಿದೆ. ಹಾಗೆಯೇ ಎಚ್1ಎನ್1, ಡೆಂಘೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿರುವುದರಿಂದ ಜನರು ಜಾಗೃತಿ ವಹಿಸಬೇಕಿದೆ.
ಸಾಮಾನ್ಯ ಕಾಯಿಲೆಯ ಜತೆಗೆ ಎಚ್1ಎನ್1, ಡೆಂಘೆ, ಚಿಕೂನ್ಗೂನ್ಯ ವೈರಾಣುಗಳಿಂದಲೂ ಹಲವರು ಹಾಸಿಗೆ ಹಿಡಿದಿದ್ದಾರೆ. ಜನವರಿ, ಫೆಬ್ರವರಿಯಲ್ಲಿ ಹೆಚ್ಚು ಕಾಣಿಸುತ್ತಿದ್ದ ಎಚ್1ಎನ್1 ವರ್ಷವಿಡೀ ಜಿಲ್ಲೆಯ ಜನರನ್ನು ಬಾಧಿಸಿದೆ. ಜಿಲ್ಲೆಯ 79 ಜನರಿಗೆ ಎಚ್1ಎನ್1 ಶಂಕಿತ ಪ್ರಕರಣಗಳಿದ್ದು, ಇದರಲ್ಲಿ 30 ಜನರಿಗೆ ರೋಗ ಇರುವುದು ದೃಢಪಟ್ಟಿದೆ. ರೋಗ ಬಂದವರಲ್ಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ.
ಚಿಕ್ಕಮಗಳೂರು ನಗರವೊಂದರಲ್ಲೇ 35 ಶಂಕಿತ ಪ್ರಕರಣಗಳಿಚೆ. ಈ ಪೈಕಿ 16 ಜನರಿಗೆ ಎಚ್1ಎನ್1 ಇರುವುದು ದೃಢಪಟ್ಟಿದೆ. ತರೀಕೆರೆ 13, ಕೊಪ್ಪ 11, ಎನ್.ಆರ್.ಪುರದಲ್ಲಿ 9 ಶಂಕಿತ ಪ್ರಕರಣಗಳಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ ದೃಢಪಟ್ಟ ಅತಿ ಹೆಚ್ಚು 13, ಮೂಡಿಗೆರೆಯಲ್ಲಿ 1 ಪ್ರಕರಣವಿದೆ. ಹಾಗಾಗಿ ಆರೋಗ್ಯ ಇಲಾಖೆ ನಿಯಂತ್ರಣಕ್ಕಾಗಿ ತ್ವರಿತವಾಗಿ ಕ್ರಮ ಕೈಗೊಂಡಿದೆ.
ಚಿಕಿತ್ಸೆ ನಂತರವೂ ಅತಿಯಾದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದರೆ ಅಂತ ರೋಗಿಯನ್ನು ಆರೋಗ್ಯ ಇಲಾಖೆ, ಕ್ಯಾಟಗರಿ ಬಿ ಎಂದು ಪರಿಗಣಿಸಿ ಟ್ಯಾಮಿಪ್ಲೂ ಮಾತ್ರೆ ನೀಡುತ್ತದೆ. ಈ ಮಾತ್ರೆ ಸೇವಿಸಿದ ನಂತರವೂ ಗುಣಮುಖನಾಗದರೆ ಹೋದರೆ ಕ್ಯಾಟಗರಿ ಸಿ ಎಂದು ಪರಿಗಣಿಸಿ ಆನತ ಗಂಟಲು ಕಫ ತೆಗೆದು ಮಣಿಪಾಲ ವೈರಾಣು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಪಾಸಿಟೀವ್ ಬಂದರೆ ಆ ಪ್ರಕರಣವನ್ನು ಎಚ್1ಎನ್1 ದೃಡಪಟ್ಟ ಪ್ರಕರಣವೆಂದು ಪರಿಗಣಿಸಲಾಗುತ್ತದೆ.
ಡೆಂಘಿಗೆ ನಿಖರ ಔಷಧವಿಲ್ಲ, ರೋಗದ ಲಕ್ಷಣ ತಿಳಿದು ವೈದ್ಯರು ಔಷಧೋಪಚಾರ ಮಾಡುತ್ತಾರೆ. ಈ ರೋಗಗಳನ್ನು ಹೊತ್ತುತರುವುದು ಈಡೀಸ್ ಈಜಿಪ್ಟೈ ಸೊಳ್ಳೆ. ಇದನ್ನು ಟೈಗರ್ ಮಸ್ಕಿಟೊ ಎಂದು ಕರೆಯುತ್ತಾರೆ. ತೆರೆದ ಶುದ್ಧ ನೀರಿನ ಸಂಪು, ಡ್ರಮ್ ಪಾತ್ರೆಗಳಲ್ಲಿ ಬೆಳೆಯುವ ಈ ಸೊಳ್ಳೆ ಹಗಲು ವೇಳೆ ಮಾತ್ರ ಕಚ್ಚುತ್ತದೆ. ರೋಗ ಇರುವ ವ್ಯಕ್ತಿಗೆ ಕಚ್ಚಿದ ಈ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದರೆ ರೋಗಾಣು ಹರಡುತ್ತದೆ. ಜಿಲ್ಲೆಯಲ್ಲಿ ಎಚ್1ಎನ್1, ಡೆಂಘ, ಚಿಕೂನ್ಗೂನ್ಯ ಶಂಕಿತ ಹಾಗೂ ದೃಢಪಟ್ಟ ಪ್ರಕರಣಗಳಿದ್ದರೂ ನಿಯಂತ್ರಿಸಲಾಗಿದೆ ಎಂದು ಸಾಂಕ್ರಾಮಿಕ ರೋಗಗಳ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಮಂಜುನಾಥ್ ತಿಳಿಸಿದ್ದಾರೆ.
ವೈರಾಣು ಜ್ವರ ಬಂದಾಗ ತೀವ್ರ ಶೀತ, ಜ್ವರ, ಮೈಕೈ ನೋವಾಗುತ್ತದೆ. ಕೂಡಲೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಪಡೆದು ಎರಡು ದಿನಗಳ ನಂತರವೂ ಸುಧಾರಣೆ ಕಾಣದಿದ್ದರೆ ಕೂಡಲೆ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬೇಕು. ಸಾಂಕ್ರಾಮಿಕ ರೋಗಗಳಿಗೆ ಅವಶ್ಯವಿರುವ ಔಷಧ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಎಲ್ಲ ಸರ್ಕಾರಿ ವೈದ್ಯರಿಗೆ ಈ ರೋಗಗಳ ನಿಯಂತ್ರಣ ಹಾಗೂ ಚಿಕಿತ್ಸೆ ಕ್ರಮದ ಕಾರ್ಯಾಗಾರ ಮಾಡಲಾಗಿದೆ ಎಂದು ಹೇಳಿದರು…..