ಧರ್ಮ-ಜ್ಯೋತಿ:
ಹಿಂದೂ ಪಂಚಾಂಗದ 12 ಮಾಸಗಳಲ್ಲಿ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚುಮು.. ಚುಮು ಚಳಿ, ಮರಗಟ್ಟುವ ವಾತಾವರಣದಲ್ಲಿ ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ ಇವು ಮಾರ್ಘಶಿರ ಮಾಸದ ಆಚರಣೆ.
ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ 9 ನೇ ಮಾಸದಲ್ಲಿ ಉಳಿದೆಲ್ಲದಕ್ಕಿಂತಲೂ ದೈವಾರಾಧನೆಗೇ ಅದರಲ್ಲೂ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ.ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ವೇದ, ಆಗಮಗಳಲ್ಲಿ ಈ ಮಾಸವನ್ನು ದೈವೀ ಕಾರ್ಯಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆಯಾದರೂ, ವಿವಾಹವೇ ಮೊದಲಾದ ಶುಭ ಕಾರ್ಯಗಳನ್ನು ಮಾತ್ರ ಮಾಡುವುದಕ್ಕೆ ಇದು ಅತ್ಯಂತ ಶ್ರೇಷ್ಠವಾದ ಮಾಸ ಅಲ್ಲ. ಕೇವಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವುದಕ್ಕೆ ಈ ಮಾಸವನ್ನು ಮೀಸಲಿರಿಸಲಾಗಿದೆ ಆದ್ದರಿಂದ ಇದನ್ನು ಶೂನ್ಯ ಮಾಸ ಎಂದೂ ಹೇಳಲಾಗುತ್ತದೆ.
ಧನುರ್ಮಾಸದಲ್ಲಿಯೇ ಏಕೆ ಪೂಜೆಗಳಿಗೆ ವಿಶೇಷ ಫಲ? ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ?
ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ನಮ್ಮ ಹಿಂದೂ ಪಂಚಾಂಗವನ್ನು ವಿಭಾಗಿಸಿದ್ದೇವೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿ. ಮಾರ್ಘಶಿರ ಮಾಸ/ ಧನು ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ ಆದ ಕಾರಣ ದೇವತೆಗಳಿಗೇ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಇದೆ ಎನ್ನುತ್ತಾರೆ.
ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಟಿಯನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸ್ಕಂದ ಷಷ್ಠಿ ಆಚರಣೆ ಹೆಚ್ಚು ನಡೆಯಲಿದ್ದು, ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ……