ವಿಜಯಪುರ:
ಜಗತ್ತಿನಲ್ಲಿ ಪ್ರತಿ ದಿನ ಪ್ರತಿ ನಿಮಿಷಕ್ಕೆ ಒಂದು ಹೆಣ್ಣು ಮಗು ಪ್ರಸೂತಿ ಹಾಗೂ ಜನನದ ತೊಂದರೆಯಿಂದ ಸಾವನಪ್ಪುತ್ತಿರುವುದು ಆತಂಕಕಾರಿ ಎಂದು ಖ್ಯಾತ ವೈದ್ಯ ಪದ್ಮಶ್ರೀ ಡಾ. ಕಾಮಿನಿ ರಾವ್ ಹೇಳಿದರು.
ಬಿಎಲ್ಡಿಇ ವಿವಿ 6ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಈ ಮರಣದ ಪ್ರಮಾಣದಲ್ಲಿ ಶೇ.98 ಮರಣಗಳು ಮುಂದುವರೆದ ರಾಷ್ಟ್ರಗಳಲ್ಲಿ ಸಂಭವಿಸುತ್ತಿರುವುದು ಇನ್ನೂ ಆತಂಕಕಾರಿಯಾಗಿದೆ. ಈ ಘಟಿಕೋತ್ಸವ ಭಾಷಣ ಮುಗಿಸುವ 10 ನಿಮಿಷಗಳಲ್ಲಿ 10 ಹೆಣ್ಣು ಮಕ್ಕಳು ಸಾವನ್ನಪ್ಪುತ್ತಿದ್ದು, ಇದರಲ್ಲಿ 9 ಮಕ್ಕಳು ಆಫ್ರಿಕಾ ಅಥವಾ ಏಷ್ಯಾ ದೇಶದವರಾಗಿದ್ದಾರೆ. ಕೆಲವು ಮುಂದುವರೆದ ರಾಷ್ಟ್ರಗಳಲ್ಲಿ 8,700 ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದರೆ, ಇನ್ನೂ ಕೆಲವು ದೇಶಗಳಲ್ಲಿ 10 ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪುತ್ತಿದೆ ಎಂದರು.
ಸಾಮಾಜಿಕ ಮೂಢನಂಬಿಕೆಗಳ ನಿವಾರಣೆ, ಶಿಕ್ಷಣ ಹಾಗೂ ಆರೋಗ್ಯದಲ್ಲಿ ಸುಧಾರಣೆ, ಲಿಂಗಪತ್ತೆ ತಡೆಯುವುದರಿಂದ ಹೆಣ್ಣು ಮಗುವಿನ ಸಾವನ್ನು ನಿಲ್ಲಿಸಬಹುದಾಗಿದೆ. ಆದರೆ ಭಾರತದಂತಹ ದೇಶದಲ್ಲಿ ಇವುಗಳನ್ನು ಸರಿಪಡಿಸಲು ಇರುವ ಸರ್ಕಾರಿ ವ್ಯವಸ್ಥೆ ದುರ್ಬಲವಾಗಿದ್ದು ಮತ್ತು ಅಧಿಕಾರಶಾಹಿಯ ಭ್ರಷ್ಟಾಚಾರದಿಂದ ಇದು ಸಾಧ್ಯವಾಗುತ್ತಿಲ್ಲ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಪರಂಪರಾಗತವಾಗಿ ಮನೆ ಕೆಲಸ, ಮಕ್ಕಳನ್ನು ಬೆಳೆಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಅದನ್ನು ದಾಟಿ ಬೆಳೆಯುವ ಸಾಮರ್ಥ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಮಾಜದ ಒಂದು ವರ್ಗ ಮಹಿಳೆ ಹಾಗೂ ಪುರುಷರಿಗೆ ಸಮಾನ ಶಿಕ್ಷಣ, ಉದ್ಯೋಗಾವಕಾಶಗಳನ್ನು ನೀಡುತ್ತಿರುವುದು ಸಮಾಧಾನ ತಂದಿದೆ ಎಂದರು.ಅತ್ಯುತ್ತಮ ಸಂಶೋಧನೆಗಾಗಿ ಡಾ. ಶೈಲಜಾ ಬಿದರಿ, ಡಾ. ಹಾದಿಮನಿ ಅವರನ್ನು ಗೌರವಿಸಲಾಯಿತು……