ತಿರುವನಂತಪುರ/ಶಬರಿಮಲೆ:
ಸುಪ್ರೀಂ ತೀರ್ಪಿನ ನಂತರ ಸಂಘರ್ಷಮಯ ತಾಣವಾಗಿ ಮಾರ್ಪಟ್ಟಿದೆ ಅಯ್ಯಪ್ಪನ ಸನ್ನಿಧಾನದ ಸುತ್ತ ಸತತ ಮೂರನೇ ದಿನವೂ ಭಕ್ತರ ಪ್ರತಿಭಟನೆ ಮತ್ತಷ್ಟು ಜೋರಾಗಿದೆ. ಮಹಿಳೆಯರ ಎಂಟ್ರಿಗೆ ಅಯ್ಯಪ್ಪನ ಭಕ್ತರು ನಡೆಸುತ್ತಿರುವ ಪ್ರತಿಭಟನೆಗೆ ದೇವಸ್ಥಾನದ ಮುಖ್ಯ ರಾಜೀವಾರು ಕಂದರಾರು ಕೈಜೋಡಿಸಿರುವ ಪರಿಣಾಮ ಇದೇ ಮೊದಲ ಬಾರಿಗೆ ಶುಕ್ರವಾರ ಪೂಜಾ ಕೈಂಕರ್ಯಗಳಿಗೆ 1ಗಂಟೆಗೂ ಹೆಚ್ಚುಕಾಲ ಅಡಚಣೆಯುಂಟಾಗಿದೆ
200 ಪೊಲೀಸರ ಸರ್ಪಗಾವಲಿನಲ್ಲಿ ಹೈದರಾಬಾದ್ ಮೂಲದ ಮೊಜೊ ಟಿವಿಯ ವರದಿಗಾರ್ತಿ ಕವಿತಾ ಜಕ್ಕಲ್,’ಕಿಸ್ ಆಫ್ ಲವ್ ‘ ಆಂದೋಲನದ ಮುಂಚೂಣಿಯಲ್ಲಿದ್ದ ರೆಹಾನಾ ಫಾತಿಮಾ ಅವರು ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದರು. ಇಬ್ಬರಿಗೂ ಗುಂಡು ನಿರೋಧಕ ಜಾಕೆಟ್ ಮತ್ತು ಹೆಲ್ಮೆಟ್ ಒದಗಿಸಲಾಗಿತ್ತು. ದೇವಾಲಯದ 500 ಮೀಟರ್ ಅಂತರದವರೆಗೂ ಕವಿತಾ ಹಾಗೂ ರೆಹಾನಾ ಪ್ರವೇಶಿಸಿದ್ದರು.
ಭಕ್ತರ ಪ್ರತಿಭಟನೆ ನಡುವೆಯೂ ಅವರು ಮುನ್ನುಗ್ಗಲು ಹೋದಾಗ ದೇವಸ್ಥಾನ ಮುಖ್ಯ ಅರ್ಚಕ ರಾಜೀವಾರು ಕಂದರಾರು ಅವರ ನೇತೃತ್ವದಲ್ಲಿ ಅರ್ಚಕರು ಪೂಜಾ ಕೈಂಕರ್ಯಗಳನ್ನು ಬದಿಗೊತ್ತಿ ಖುದ್ದು ಅಖಾಡಕ್ಕೆ ಇಳಿದರು. ”ಸಂಪ್ರದಾಯ ಮೀರಲು ಸಾಧ್ಯವಿಲ್ಲ. ಇಲ್ಲಿಂದ ಮಹಿಳೆಯರು ವಾಪಸ್ ಹೊರಟರೆ ಸರಿ, ಇಲ್ಲದಿದ್ದರೆ ದೇವಸ್ಥಾನಕ್ಕೆ ಬಿಗ ಹಾಕುತ್ತೇವೆ. ನಮ್ಮ ಪ್ರಾಣ ಹೋದರೂ ಸರಿ, ಪವಿತ್ರ 18 ಮೆಟ್ಟಿಲು ಹತ್ತಿ ಮಹಿಳೆಯರ ಪ್ರವೇಶಕ್ಕೆ ಆಸ್ಪದ ಕೊಡುವುದಿಲ್ಲ,” ಎಂದು ಎಚ್ಚರಿಸಿದರು
ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಬಲ ಪ್ರಯೋಗಕ್ಕೆ ಮುಂದಾಗದೇ ಸಂಧಾನದ ಮೊರೆ ಹೋದರೂ ಅದು ಫಲಕೊಡಲಿಲ್ಲ. ವಿಧಿಯಿಲ್ಲದೇ ಮಹಿಳೆಯರನ್ನು ಸಮಾಧಾನ ಪಡಿಸಿ ವಾಪಸ್ ಪಂಪಾ ಬೇಸ್ ಕ್ಯಾಂಪ್‌ಗೆ ಕಳುಹಿಸಿದರು……..