Breaking News

ನೀರು ಸದ್ಬಳಕೆಯಲ್ಲಿ ಅಧಿಕಾರಿಗಳು ವಿಫಲ..!

ಸಿರಿಗೆರೆ ಶ್ರೀ ಶಿವಾಚಾರ್ಯ ಸ್ವಾಮೀಜಿ ಬೇಸರ ....

SHARE......LIKE......COMMENT......

ಹರಿಹರ:

ಈ ವರ್ಷ ಸುರಿದ ಮಳೆಗೆ ತುಂಗಭದ್ರಾ ನದಿ ತುಂಬಿ ಹರಿದಿತ್ತು. ಈ ನೀರನ್ನು ಸದ್ಬಳಕೆ ಮಾಡಿದ್ದರೆ ಜಿಲ್ಲೆಯ 22 ಕೆರೆಗಳು ತುಂಬಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಕಾಶ ಕೈತಪ್ಪಿದೆ ಎಂದು ಸಿರಿಗೆರೆ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ರಾಜನಹಳ್ಳಿ ಬಳಿಯ 22 ಕೆರೆಗಳಿಗೆ ನೀರು ತುಂಬಿಸುವ ಜಾಕ್‌ವೆಲ್‌ಗೆ ಮಂಗಳವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಕಳೆದ ವರ್ಷ ಮಳೆಯಿಲ್ಲದಾಗಲೇ ತುಂಗಭದ್ರಾ ನದಿಯಿಂದ ಅನೇಕ ಕೆರೆಗಳಿಗೆ ಶೇ.70 ರಿಂದ 80ರಷ್ಟು ನೀರು ತುಂಬಿಸಲಾಗಿತ್ತು. ಈ ಬಾರಿ ನದಿ ಮೈದುಂಬಿ ಹರಿದರೂ ನೀರು ತುಂಬಿಸಲಾಗದೇ 127 ಟಿಎಂಸಿ ನೀರು ಸಮುದ್ರದ ಪಾಲಾಗಿದೆ ಎಂದರು.ನದಿ ಸಮೀಪ ಹೆಚ್ಚುವರಿ ಬೆಡ್ ನಿರ್ಮಿಸಿದರೆ ಇಲ್ಲಿನ ರೈತರಿಗೆ ಯಾವುದೇ ತೊಂದರೆ ಉದ್ಭವಿಸದು.ಮಳೆಗಾಲದಲ್ಲಿ ಮಾತ್ರ ನದಿ ನೀರನ್ನು ಕೆರೆಗಳಿಗೆ ಪಂಪ್ ಮಾಡಲಾಗುವುದು. ಹೆಚ್ಚುವರಿಯಾಗಿ ಸಮುದ್ರದ ಪಾಲಾಗುವ ನೀರು ಸುತ್ತಮುತ್ತಲಿನ ಕೆರೆಗಳ ಪಾಲಾಗಲಿದೆ ಎಂದು ತಿಳಿ ಹೇಳಿದರು.

ಯಾವುದೇ ಸರ್ಕಾರ ಇರಲಿ ಜನಹಿತ ಕಾರ್ಯಗಳ ಅಗತ್ಯ ಇದ್ದಾಗ ರಾಜಕೀಯ ಮರೆತು ಸಮಾಜ ಸ್ನೇಹಿ ಕಾರ್ಯಕ್ಕೆ ಮುಂದಾಗಬೇಕು. ಇದಕ್ಕೆ ಒತ್ತಾಸೆಯಾಗಿ ನಿಂತ ಶಾಸಕರಾದ ಪ್ರೊ. ಲಿಂಗಣ್ಣ ಹಾಗೂ ರಾಮಚಂದ್ರಪ್ಪ ಅವರ ಕಾರ್ಯ ಶ್ಲಾಘನೀಯ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, 22ಕೆರೆಗಳ ಹೋರಾಟ ಸಮಿತಿ ಅಧ್ಯಕ್ಷ ಡಾ. ಮಂಜುನಾಥಗೌಡ, ನೀರಾವರಿ ನಿಗಮ ಹಾಗೂ ಬೆಸ್ಕಾಂ ಅಧಿಕಾರಿಗಳು, ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು…..