ಸಿನಿಮಾ:
ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆದಾಗಿನಿಂದ ಒಂದಾದ ಮೇಲೋಂದು ದಾಖಲೆ ಬರೆಯುತ್ತಲೇ ಇದೆ. ಚಂದನವನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಬಿಡುಗಡೆಯಾಗಿ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಅಷ್ಟರ ಮಟ್ಟಿಗೆ ಈ ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿಯೇ 720.31 ಕೋಟಿ ಗಳಿಸಿ ದೇಶಾದ್ಯಂತ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅದರ ಎರಡನೇ ವಾರದಲ್ಲಿ, ಇದು ಶುಕ್ರವಾರದ ವೇಳೆಗೆ ರೂ 776.58 ಕೋಟಿ ಗಳಿಸಿತು. ಬಳಿಕ ಸಿನಿಮಾ 1000 ಕೋಟಿ ಕ್ಲಬ್ ಸೇರಿಯೂ ಆಯಿತು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದು, ರಾಕಿಭಾಯ್ ಪಾತ್ರದಲ್ಲಿ ಯಶ್ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ.
ಸಿನಿಮಾ ರಿಲೀಸ್ ಆಗಿ 43 ದಿನಗಳು ಕಳೆದಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಕೆಜಿಎಫ್ 2 ಸಿನಿಮಾ ಮತ್ತೊಂದು ದಾಖಲೆಯನ್ನು ಬರೆದಿದೆ. ಬಾಹುಬಲಿ 2 ಚಿತ್ರದ ಕಲೆಕ್ಷನ್ ಅನ್ನು ಕೆಜಿಎಫ್ 2 ಮುಟ್ಟಿಲ್ಲ. ಆದರೆ, ಟಿಕೆಟ್ ವಿಚಾರದಲ್ಲಿ ಬಾಹುಬಲಿ 2 ದಾಖಲೆಯನ್ನು ಕೆಜಿಎಫ್ 2 ಉಡೀಸ್ ಮಾಡಿದೆ.
ಸಿನಿಮಾದ ಟಿಕೆಟ್ ಮಾರಾಟ ಆಗಿರುವ ಬಗ್ಗೆ ಹೊಸದೊಂದು ಸಮೀಕ್ಷೆ ಹೊರಬಿದ್ದಿದೆ. ಬುಕ್ ಮೈ ಶೋ ನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ನಂ.1 ಸ್ಥಾನ ಪಡೆದಿದೆ. ಬುಕ್ ಮೈ ಶೋ ನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಇದು ವರೆಗೆ ಕೆಜಿಎಫ್ 2 ಸಿನಿಮಾದ ಒಟ್ಟು 17.1 ಮಿಲಿಯನ್ ಟಿಕೆಟ್ ಬುಕ್ ಮೈ ಶೋ ಮೂಲಕ ಮಾರಾಟವಾಗಿವೆ. ಈ ಮೂಲಕ ಬಾಹುಬಲಿ 2 ಸಿನಿಮಾದ ದಾಖಲೆಯನ್ನು ಪುಡಿ ಪುಡಿ ಮಾಡಿದೆ. ಬುಕ್ ಮೈ ಶೋ ನಲ್ಲಿ ಬಾಹುಬಲಿ 2 ಚಿತ್ರದ 16 ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿದ್ದವು. ಸದ್ಯ ಕೆಜಿಎಫ್ 2 ಚಿತ್ರದ ದಾಖಲೆ ನಾಗಾಲೋಟ ಮುಂದುವರೆದಿದೆ…..