Breaking News

ಸೋಮವಾರದಿಂದ ಯದುವೀರ್ ದರ್ಬಾರ್ ಅರಮನೆಯಲ್ಲಿ ಶರನ್ನವರಾತ್ರಿ ಸಂಭ್ರಮ..!

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ....

SHARE......LIKE......COMMENT......

ಮೈಸೂರು:

ನಾಡ ಹಬ್ಬ ದಸರಾ ಕಳೆಗಟ್ಟಿದೆ. ಮೈಸೂರಲ್ಲಿ ಸಂಭ್ರಮ ಮನೆ ಮಾಡಿದ್ದು, ಸೋಮವಾರದಿಂದ 10 ದಿನಗಳ ಕಾಲ ಮೈಸೂರಲ್ಲಿ ಸ್ವರ್ಗವೇ ಧರೆಗಿಳಿಯಲಿದೆ. ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ‘ಶರನ್ನವರಾತ್ರಿ’ ಸಂಭ್ರಮ ಜೋರಾಗಿದೆ. ಯದುವೀರ್ 8ನೇ ವರ್ಷದ ಖಾಸಗಿ ದರ್ಬಾರ್‌ಗೆ ಸಕಲ ಸಿದ್ಧತೆ ನಡೆದಿದ್ದು, ನವರಾತ್ರಿ ಪ್ರಯುಕ್ತ ಅರಮನೆಯಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

10 ದಿನಗಳ ಕಾಲ ಸಾಂಪ್ರದಾಯಿಕ, ಧಾರ್ಮಿಕ ವಿಧಿ – ವಿಧಾನಗಳನ್ನ ಆಚರಿಸಲಾಗುತ್ತದೆ. ಬೆಳಗ್ಗೆ 5.30 ರಿಂದ ಕಾರ್ಯಕ್ರಮ ಆರಂಭ ಆಗಲಿದೆ. ಸೋಮವಾರ ಮುಂಜಾನೆ 5.10 ರಿಂದ 5.30ರೊಳಗೆ ಸಿಂಹ ಜೋಡಣೆ ಆಗಲಿದೆ. ದರ್ಬಾರ್ ಹಾಲ್‌ನಲ್ಲಿ ಜೋಡಿಸಿರುವ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. ಯದುವೀರ್ ಒಡೆಯರ್‌ಗೆ ಚಾಮುಂಡಿ ತೊಟ್ಟಿಯಲ್ಲಿ ಕಂಕಣ ಧಾರಣೆ ಮಾಡಲಾಗುತ್ತದೆ.

ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ನಡೆಯಲಿದೆ. ಕನ್ನಡಿ ತೊಟ್ಟಿಗೆ ಆಗಮಿಸಲಿರುವ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗೆ ವಿಶೇಷ ಪೂಜೆ ನೆರವೇರಲಿದೆ. ಬೆಳಗ್ಗೆ 9.50 ರಿಂದ 10.35 ರ ಒಳಗೆ ಕಳಶ ಪೂಜೆ, ಸಿಂಹಾರೋಹಣ ನೆರವೇರಲಿದೆ. ಬಳಿಕ ಯದುವೀರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಖಾಸಗಿ ದರ್ಬಾರ್ ಹಿನ್ನೆಲೆ ಸೋಮವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ.

ಗಜಪಡೆ ತಾಲೀಮು ರದ್ದು:

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಜಪಡೆ ತಾಲೀಮಿಗೆ ಮಹಾಲಯ ಅಮಾವಾಸ್ಯೆ ಎಫೆಕ್ಟ್ ತಟ್ಟಿದೆ. ಪ್ರತಿ ದಿನ ಬೆಳಗ್ಗೆ, ಸಂಜೆ ನಡೆಯುತ್ತಿದ್ದ ದಸರಾ ಗಜಪಡೆ ತಾಲೀಮನ್ನು ರದ್ದು ಮಾಡಲಾಗಿದ್ದು, ಅಮಾವಾಸ್ಯೆ ಕಾರಣ ಆನೆಗಳಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನ ಅರಮನೆಯಿಂದ ದಸರಾ ಆನೆಗಳನ್ನು ಹೊರಕ್ಕೆ ಕರೆದೊಯ್ದರೆ ತೊಂದರೆಯಾಗುವ ಆತಂಕ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಪ್ರತಿ ಅಮಾವಾಸ್ಯೆಯಂದು ಗಜಪಡೆ ತಾಲೀಮನ್ನು ರದ್ದು ಮಾಡಲಾಗುತ್ತೆ.

ಬೆಟ್ಟಕ್ಕೆ ಭಕ್ತರ ದಂಡು:

ವಾರಾಂತ್ಯ ಭಾನುವಾರ ಹಾಗೂ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿದೆ. ಸರದಿ ಸಾಲಿನಲ್ಲಿ ನಿಂತು ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ. ದಸರಾ ಉದ್ಘಾಟನೆ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಸರ್ಪಗಾವಲು ನಿಯೋಜನೆ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಬರುವ ವಾಹನಗಳನ್ನು ತೀವ್ರ ತಪಾಸಣೆ ಮಾಡುತ್ತಿದ್ದಾರೆ……