ರಾಮನಗರ:
ಕಾಂಗ್ರೆಸ್ ಹಾಗೂ ಜೆಡಿಸ್ ದಲಿತ ಸಮುದಾಯವನ್ನು ಮತಬ್ಯಾಂಕ್’ ಆಗಿ ಬಳಸಿಕೊಳ್ಳುತ್ತಿದೆ ವಿನಃ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆ.ಶಿವರಾಂ ಆರೋಪಿಸಿದರು.ಹಳ್ಳಿಮಾಳದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದ್ದರೂ ದಲಿತ ಸಮುದಾಯದ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಕ್ಕೆ ಬರಲು ಈ ಎರಡೂ ಪಕ್ಷಗಳು ದಲಿತ ಸಮುದಾಯವನ್ನು ಬಳಸಿಕೊಳ್ಳುತ್ತವೆ. ಅಧಿಕಾರ ದೊರೆತ ನಂತರ ನಿರ್ಲಕ್ಷಿಸುತ್ತವೆ ಎಂದು ದೂರಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 78 ಸ್ಥಾನ ಪಡೆಯಿತು. ಮೈತ್ರಿ ಸರ್ಕಾರ ರಚನೆಯಾದರೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟವನ್ನು ತಪ್ಪಿಸಲು ಕೇವಲ 37 ಸ್ಥಾನ ಪಡೆದಿದ್ದ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು ಎಂದು ದೂರಿದರು.
ರಾಜ್ಯದಲ್ಲಿ 1.8 ಕೋಟಿ ಪರಿಶಿಷ್ಟ ಜಾತಿ, 45 ಲಕ್ಷ ಪರಿಶಿಷ್ಟ ಪಂಗಡ ಹಾಗೂ 75 ಲಕ್ಷ ಮುಸ್ಲಿಮರಿದ್ದಾರೆ. ಇವರನ್ನೆಲ್ಲ ಚುನಾವಣಾ ಸಮಯದಲ್ಲಿ ಬಳಸಿಕೊಂಡು ಅಧಿಕಾರಕ್ಕೆ ಬರುವ ಕಾಂಗ್ರೆಸ್, ಜೆಡಿಎಸ್ ನಂತರ ನಿರ್ಲಕ್ಷಿಸುತ್ತವೆ. ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ, ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ದಿಕ್ಕು ತಪ್ಪಿಸಲು ಬಿಜೆಪಿ ಅಧಿಕಾರಕ್ಕೆ ಬಂದರೆ ‘ಸಂವಿಧಾನ’ ಬದಲಾಯಿಸುತ್ತದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದರು.
ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಮಿತ್ ಷಾ ‘ಸಂವಿಧಾನ ಪವಿತ್ರಗ್ರಂಥ’ ಎಂದು ಹೇಳಿದ್ದಾರೆ. ಸಂವಿಧಾನವನ್ನು ಈ ಹಿಂದಿನ ಸರ್ಕಾರಗಳು ತಿದ್ದುಪಡಿ ಮಾಡಿವೆ. ಈಗಿನ ಮೈತ್ರಿ ಸರ್ಕಾರ ಎಸ್ಸಿ, ಎಸ್ಟಿ ಸರ್ಕಾರಿ ನೌಕರರಿಗೆ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆಯನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿದೆ. ಸರ್ಕಾರದ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಅವರು ಈ ಕಾಯ್ದೆಯನ್ನು ಅನುಷ್ಠಾನಗೊಳಿಸುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಮುಂದುವರಿಸಲಿಲ್ಲ, ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರೆ ಕಾರಣ ಎಂದು ತಿಳಿಸಿದರು…..