ಯಾದಗರಿ:
ಜಿಲ್ಲೆಯಲ್ಲಿ ಹಲವು ತಿಂಗಳಿಂದ ಸ್ಥಗಿತಗೊಂಡಿದ್ದ ಅಕ್ರಮ ಮರಳು ಗಣಿಗಾರಿಕೆ ಗಡಿ ಭಾಗದಲ್ಲಿ ಇದೀಗ ಸದ್ದಿಲ್ಲದೆ ಆರಂಭಗೊಂಡಿದೆ. ಹಳ್ಳ ಕೊಳ್ಳಗಳಲ್ಲಿ ಜೆಸಿಬಿಗಳು ಸದ್ದು ಮಾಡಲಾರಂಭಿಸಿದ್ದು, ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಜನಸಾಮನ್ಯರಿಂದ ಕೇಳಿ ಬರತೊಡಗಿದೆ.
ತೆಲಂಗಾಣ ಗಡಿಗೆ ಅಂಟಿಕೊಂಡಿರುವ ಗುರುಮಠಕಲ್ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಅಕ್ರಮ ಮರಳು ಮಾಫಿಯಾ ಗರಿಗೆದರಿದ್ದು, ಕೋಟ್ಯಂತರ ರೂ. ಮೌಲ್ಯದ ಪ್ರಾಕೃತಿಕ ಸಂಪತ್ತು ದಂಧೆಕೋರರ ಪಾಲಾಗುತ್ತಿದೆ. ಈ ಮೊದಲು ರಾತ್ರಿ ಮಾತ್ರ ಮರಳು ಮಾಫಿಯಾ ಜಾಗೃತಗೊಳ್ಳುತ್ತಿತ್ತು. ಆದರೀಗ ಹಾಡಹಗಲಲ್ಲೇ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ.
ಕಂದಾಯ, ಪೊಲೀಸ್, ಗಣಿ ಇಲಾಖೆ ಸೇರಿ ಜಿಲ್ಲಾಡಳಿತ ತೆಲೆಕೆಡಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸಂಪೂರ್ಣ ಬೆಟ್ಟಗುಡ್ಡಗಳಿಂದ ಕೂಡಿರುವ ಗುರುಮಠಕಲ್ ಕ್ಷೇತ್ರ ಪ್ರಾಕೃತಿಕ ಸಂಪತ್ತನೇ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಮತಕ್ಷೇತ್ರದಲ್ಲಿ ಯಾವುದೇ ನದಿ ಹರಿಯದಿದ್ದರೂ ಕೆಲ ಹಳ್ಳಗಳು ಯಾವ ನದಿಗೂ ಕಮ್ಮಿ ಇಲ್ಲದಂತಿವೆ. ಆದರೆ ಮರಳು ದಂಧೆಯಿಂದಾಗಿ ನೀರು ಬತ್ತಿದ್ದು, ಜನತೆಗೆ ಕುಡಿಯಲು ಹಾಗೂ ಕೃಷಿಗಾಗಿ ನೀರು ಇಲ್ಲದಂತಾಗಿದೆ.
ಕೂಡ್ಲೂರ, ಗೂಡೂರು ಹಾಗೂ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಹಳ್ಳಗಳನ್ನೇ ಮರಳು ದಂಧೆಕೋರರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈ ಗ್ರಾಮಗಳ ಹಳ್ಳಗಳಲ್ಲಿ ಎಗ್ಗಿಲ್ಲದೆ ಮರಳು ಅಗೆಯಲಾಗುತ್ತಿದ್ದು, ಜಲಾಲಪುರ ಚೆಕ್ ಪೋಸ್ಟ್ ಹತ್ತಿರದ ತೆಲಂಗಾಣ ಪ್ರದೇಶದಲ್ಲಿ ನೂರಾರು ಟನ್ ಮರಳು ಸಂಗ್ರಹಿಸಲಾಗುತ್ತಿದೆ……