ನ್ಯಾಯಾಲಯದಲ್ಲಿ ಕಕ್ಷಿದಾರರ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ವಕೀಲರು ಕರ್ತವ್ಯ ನಿಷ್ಠೆ ತೋರಬೇಕು ಎಂದು ಉಚ್ಚ ನ್ಯಾಯಾಲಯ ಹಾಗೂ ಗದಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಆರ್. ದೇವದಾಸ್ ಹೇಳಿದರು.
ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆ ಮಾಡಿ ನಂತರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಮತ್ತು ನ್ಯಾಯಾಂಗ ಇಲಾಖೆಯು ಮೂಲ ಸೌಲಭ್ಯ ಒದಗಿಸುವ ಜತೆಗೆ ತ್ವರಿತ ನ್ಯಾಯದಾನಕ್ಕೆ ಸರ್ವ ಪ್ರಯತ್ನ ಮಾಡುತ್ತಿವೆ. ಕಕ್ಷಿದಾರರು, ನ್ಯಾಯವಾದಿಗಳು ಕಟ್ಟಡ ಸಂರಕ್ಷಣೆ, ಸ್ವಚ್ಛತೆ ಕಾಪಾಡಬೇಕು. ಪ್ರಕರಣಗಳನ್ನು ರಾಜಿ ಸಂಧಾನ, ಲೋಕ ಅದಾಲತ್ ಮೂಲಕ ಬಗೆಹರಿಸಬೇಕು. ಅದಕ್ಕಾಗಿ ಪಟ್ಟಣದ ಹಿರಿಯ, ಕಿರಿಯ ನ್ಯಾಯಾಲಯಗಳ ಸದುಪಯೋಗ ಪಡೆಯಬೇಕು. ಸರ್ಕಾರದ ಎಲ್ಲ ಆಸ್ತಿಗಳು ಸಾರ್ವಜನಿಕರ ಸ್ವತ್ತಾಗಿದ್ದು, ಅವುಗಳನ್ನು ಸ್ವಚ್ಛವಾಗಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಸ್ತುತ ಶಿಕ್ಷಣ ಮುಖ್ಯವಾಗಿದ್ದು, ಪಾಲಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಕಾಳಜಿ ವಹಿಸಬೇಕು. ಲಕ್ಷ್ಮೇಶ್ವರ ಸಾಹಿತ್ಯ, ಸಂಸ್ಕೃತಿ, ಶಿಲ್ಪಕಲೆ ಬೀಡಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಭಾಗದ ಜನಪ್ರತಿನಿಧಿಗಳು, ಪ್ರಜ್ಞಾವಂತ ನಾಗರಿಕರು ಮಾದರಿ ನಗರವನ್ನಾಗಿಸಲು ಪ್ರಯತ್ನಿಸಬೇಕು ಎಂದರು……