ಬೆಂಗಳೂರು:
ಹೌದು, ಲಾಕ್ ಡೌನ್ ನಂಥ ಸಂಕಷ್ಟದ ಸನ್ನಿವೇಶದಲ್ಲಿ ಕೆಎಸ್ ಆರ್ ಟಿಸಿ ಆಡಳಿತ ಮಂಡಳಿ ಹೊರಡಿಸಿರುವ ಸುತ್ತೋಲೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಯಾರಿಗೆಲ್ಲಾ ಸ್ವಯಂ ನಿವೃತ್ತಿ ಪಡೆಯುವ ಆಸೆ ಇದೆಯೋ ಅವರೆಲ್ಲಾ ವಾಲಂಟರಿ ರಿಟೈರ್ಮೆಂಟ್ ಸ್ಕೀಮ್ ಗೆ ಅಪ್ಲೈ ಮಾಡಿದರೆ ಅವರಿಗೆಲ್ಲಾ ಆಕರ್ಷಕವಾದ ಬೆನಿಫಿಟ್ ಸ್ಕೀಂನ್ನು ನೀಡೋದಾಗಿ ಸುತ್ತೋಲೆ ಹೊರಡಿಸಿದೆ.
ಸ್ವಯಂ ನಿವೃತ್ತಿಯ ಸ್ಕೀಮ್ ಎಲ್ಲಾ ಇಲಾಖೆಗಳಲ್ಲೂ ಇರುವ ಹಾಗೆ ಸಾರಿಗೆ ಇಲಾಖೆಯಲ್ಲೂ ಕೂಡ ಇದೆ. ಆದರೆ ಬೇರೆ ಇಲಾಖೆಗಳು ತಮ್ಮ ನೌಕರರಿಗೆ ಹೋಗುವಾಗ, ಬರುವಾಗಲೆಲ್ಲಾ ಸ್ವಯಂನಿವೃತ್ತಿ ಪಡೆಯಿರಿ ಎಂದು ಹೇಳುತ್ತಿಲ್ಲ.ಆದರೆ ಕೆಎಸ್ಆರ್ಟಿಸಿಯಲ್ಲಿ ಮಾತ್ರ ನೌಕರರಿಗೆ ಅವರ ಮೇಲಾಧಿಕಾರಿಗಳು ಡ್ಯೂಟಿಗೆ ಬರುವಾಗ ಹಾಗೂ ಡ್ಯೂಟಿಯಿಂದ ಹೋಗುವಾಗ ವಾಲೆಂಟರಿ ರಿಟೈರ್ ಮೆಂಟಿಗೆ ಮನವೊಲಿಸುವ, ಒಪ್ಪದಿದ್ರೆ ಒತ್ತಡ ಹೇರುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸ್ವಯಂ ನಿವೃತ್ತಿ ಪಡೆಯುವ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಸಮಿತಿ ಈಗಾಗಲೇ ರಚನೆಯಾಗಿದೆ. ನವೆಂಬರ್ ನಲ್ಲಿ ರಚನೆಯಾಗಿ ನಿಷ್ಕ್ರಿಯವಾಗಿದ್ದರೂ ಲಾಕ್ಡೌನ್ ಸಂದರ್ಭದಲ್ಲಿಯೇ ದಿಢೀರ್ ಕ್ರಿಯಾಶೀಲವಾಗಿರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ವಯಂ ನಿವೃತ್ತಿಗೆ ಹೇಗೋ ಮನಸ್ಸು ಮಾಡಿ ಅರ್ಜಿ ಹಾಕುತ್ತೇವೆ ಅಂತಾನೇ ತಿಳ್ಕೊಳ್ಳೋಣ. ಆದರೆ ರಿಟೈರ್ಮೆಂಟ್ ಬೆನಿಫಿಟ್ ಶೀಘ್ರ ಬರುತ್ತೋ ಇಲ್ಲವೋ ಎನ್ನುವುದಕ್ಕೆ ಏನು ಗ್ಯಾರಂಟಿ? ಸಂಸ್ಥೆಯನ್ನು ನಡೆಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಅರ್ಜಿ ಹಾಕಿದವರಿಗೆ ತಿಂಗಳೊಳಗೆ ಅವರ ಬೆನಿಫಿಟ್ ನೆಲ್ಲಾ ಕೊಡುತ್ತೇವೆ ಎಂದು ಗ್ಯಾರಂಟಿ ಕೊಡುವವರು ಯಾರು? ಅದನ್ನು ಮೊದಲು ಸ್ಪಷ್ಟಪಡಿಸಿ ಎನ್ನುತ್ತಾರೆ ನೌಕರರು. ಈ ಸುತ್ತೋಲೆ ಸಾರಿಗೆ ನೌಕರರ ಪಾಲಿಗೆ ಮರಣ ಶಾಸನ ಎನ್ನುತ್ತಾರೆ ಕೆಎಸ್ ಆರ್ ಟಿಸಿ ನೌಕರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್. ಒಟ್ಟಿನಲ್ಲಿ ಸಾರಿಗೆ ನೌಕರರ ಸ್ವಯಂ ನಿವೃತ್ತಿಯ ಸುತ್ತೋಲೆ ತೀವ್ರ ಕೋಲಾಹಲ. ವಿವಾದ ಸೃಷ್ಟಿಸಿರುವುದಂತೂ ಸತ್ಯ…….