Breaking News

ಪೆಟ್ರೋಲ್​ಗಿಂತಲೂ ದುಬಾರಿಯಾಯ್ತು ಟೊಮೆಟೊ..!

ಕೆಜಿಗೆ 120 ರೂ ಜನಸಾಮಾನ್ಯರಿಗೆ ಇನ್ನಷ್ಟು ಸಂಕಷ್ಟ....

SHARE......LIKE......COMMENT......

ಬೆಂಗಳೂರು:

ಅನೇಕ ಬಾರಿ ಟೊಮೆಟೊಗೆ (Tomato) ಉತ್ತಮ ದರ ಸಿಗದೇ ರೈತರು ರಸ್ತೆಯಲ್ಲಿ ಸುರಿಯುವುದನ್ನು ನಾವು ಬಹುತೇಕ ಬಾರಿ ನೋಡಿರುತ್ತೇವೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ (Winter Session ) ಕೆಜಿಗೆ 20ರೂ ನಂತೆ ಮಾರಾಟ ವಾಗುತ್ತಿದ್ದ ಟೊಮೆಟೊಗೆ ಈಗ ಬಂಗಾರದ ಬೆಲೆ ಬಂದಿದೆ. ಸದ್ಯ ನಮ್ಮ ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್​ ಬಳಿಕ ಜನರಿಗೆ ಈಗ ಟೊಮೆಟೊ ಬೆಲೆ (Tomato Price) ಶಾಕ್​ ನೀಡಿದೆ. ಟೊಮೆಟೊಗೆ ಬೆಲೆ ಈ ರೀತಿ ಹೆಚ್ಚಾಗಲು ಕಾರಣ ದಕ್ಷಿಣ ಭಾರತದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಟೊಮೆಟೊ ಕೆಜಿಗೆ 120ರೂ ನಂತೆ ಮಾರಾಟವಾಗುತ್ತಿದ್ದರೆ, ನೆರೆಯ ಚೆನ್ನೈನಲ್ಲಿ ಕಿಲೋಗೆ ₹ 140 ಕ್ಕೆ ಮಾರಾಟವಾಗುತ್ತಿದೆ.

ಗಗನಮುಖಿಯಾದ ತರಕಾರಿಗಳು

ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆ ಗಗನಕ್ಕೇರಿರುವ ನಡುವೆ ಈಗ ತರಕಾರಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ಇನ್ನು ಈ ತರಕಾರಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಮಾತ್ರವಲ್ಲ, ತರಕಾರಿ ಮಾರಾಟಗಾರರಿಗೂ ಇದು ಕಷ್ಟವಾಗಿದೆ. ತರಕಾರಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪೂರೈಕೆ ಹೊಂದಿಲ್ಲದ ಕಾರಣ ಅದನ್ನು ದುಬಾರಿ ಬೆಲೆ ಕೊಟ್ಟು ತಂದು ಮಾರುವುದು ಸವಾಲ್​ ಆಗಿದೆ. ದುಬಾರಿ ಬೆಲೆ ಕೊಟ್ಟು ತಂದರೂ ಜನ ಕೊಳ್ಳುತ್ತಾರಾ ಎಂಬ ಪ್ರಶ್ನೆ ಕೂಡ ಮೂಡಿದೆ.

ಅತಿಹೆಚ್ಚು ಬೆಳೆಯುತ್ತಿದ್ದ ಚಿತ್ತೂರನಲ್ಲಿ ಪ್ರವಾಹ

ದೇಶದಲ್ಲಿ ಅತಿ ಹೆಚ್ಚು ಟೊಮೆಟೊ ಉತ್ಪಾದನೆಯನ್ನು ಆಂಧ್ರಪ್ರದೇಶದಲ್ಲಿ ಮಾಡಲಾಗುತ್ತಿತ್ತು. ಅಲ್ಲಿಯೇ ಟೊಮೊಟೋ ಬಲೆ ಕೆಜಿಗೆ 100 ರೂಗೆ ಮಾರಾಟವಾಗುತ್ತಿದೆ. ಇದರಿಂದ ಇದರ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ದೊಡ್ಡ ಪ್ರಮಾಣದ ಟೊಮೆಟೊ ಬೆಳೆಯುವ ಪ್ರದೇಶಗಳು ಮಳೆಯಿಂದ ಹಾನಿಗೊಳಗಾಗಿರುವ ಜೊತೆಗೆ ಡೀಸೆಲ್ ಬೆಲೆ ಏರಿಕೆಯು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಆಂಧ್ರಪ್ರದೇಶದಲ್ಲಿ 58000 ಹೆಕ್ಟೇರ್‌ಗಳಲ್ಲಿ ಟೊಮೆಟೊಗಳನ್ನು ಬೆಳೆಯಲಾಗುತ್ತದೆ. ಇಲ್ಲಿ ಸುಮಾರು 26.67 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಟೊಮೆಟೊ ಬೆಳೆಯಲಾಗುತ್ತದೆ. ಚಿತ್ತೂರಿನ ಮದನಪಲ್ಲಿ ಅತ್ಯಂತ ದೊಡ್ಡ ಟೊಮೆಟೊ ಮಾರುಕಟ್ಟೆ ಆದಿದೆ. ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶ ಹಾನಿಯಾಗಿದ್ದು, ಟೊಮೆಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮದುವೆ ಸೀಸನ್​ ಕೂಡ ಬೆಲೆ ಏರಿಕೆಗೆ ಕಾರಣ

ಸದ್ಯ ದಕ್ಷಿಣ ರಾಜ್ಯಗಳಿಗೆ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಕರ್ನಾಟಕದ ಚಿಕ್ಕಬಳ್ಳಾಪುರದಿಂದ ಹೆಚ್ಚಾಗಿ ಟೊಮೆಟೊ ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಹಬ್ಬ ಹರಿದಿನಗಳ ನಂತರ ಮದುವೆ ಸೀಸನ್ ಎಲ್ಲೆಡೆ ಶುರುವಾಗಿದೆ. ಹೀಗಾಗಿ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಪೂರೈಕೆಯೇ ಇಲ್ಲದಂತೆ ಆಗಿದೆ. ಈ ಪರಿಸ್ಥಿತಿಯಿಂದಾಗಿ ಕೂಡ ಟೊಮೆಟೊ ಸೇರಿದಂತೆ ಇತರೆ ತರಕಾರಿಗಳ ಬೇಡಿಕೆ ಗಗನ ಮುಖಿಯಾಗುತ್ತಿದೆ.

ಕಾಂಗ್ರೆಸ್​ ಟೀಕೆ

ಇನ್ನು ತರಕಾರಿ ಬೆಲೆ ಏರಿಕೆಯಾಗುತ್ತಿರುವ ಕುರಿತು ಟೀಕಿಸಿರುವ ಕಾಂಗ್ರೆಸ್​ ವಕ್ತಾರ ಪವನ್​ ಖೇರ, ಅಡುಗೆ ಮನೆಯಲ್ಲಿ ಈರುಳ್ಳಿ ಮತ್ತು ಟೊಮೆಟೊಗೆ 144ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಡೀಸೆಲ್ ಮತ್ತು ಕೃಷಿ ಉಪಕರಣಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸಿದ ನಂತರ ದೈನಂದಿನ ತರಕಾರಿ ಬೆಲೆಗಳು ಹೆಚ್ಚಾಗಿದೆ. ಸಾಮಾನ್ಯ ಜನರಿಗೆ ತಿಂಗಳ ಕೊನೆಯಲ್ಲಿ ಎಷ್ಟು ಹಣ ಉಳಿದಿದೆ ಎಂಬುದನ್ನು ಸರ್ಕಾರವು ಮೌಲ್ಯಮಾಪನ ಮಾಡಬೇಕು. ಇದರ ಜೊತೆಗೆ ಸರ್ಕಾರ ಉಚಿತ ಪಡಿತ ನಿಲ್ಲಿಸುವುದಾಗಿ ಕೂಡ ಮುಂದಾಗಿದೆ. ಕೋವಿಡ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಯಾವುದೇ ಸಿದ್ದತೆಯನ್ನು ಸರ್ಕಾರ ನಡೆಸಿಲ್ಲ ಎಂದು ಹರಿಹಾಯ್ದಿದ್ದಾರೆ…..