ಮಂಗಳೂರು:
ನಗರವನ್ನು ಜಲಾಭಿಮುಖಿ (ವಾಟರ್ ಫ್ರಂಟ್) ಸಿಟಿಯಾಗಿ ಅಭಿವೃದ್ಧಿಪಡಿಸುವುದು ಸ್ಮಾರ್ಟ್ ಸಿಟಿಯ ಪ್ರಮುಖ ಯೋಜನೆ. ಮುಂಬೈ ಮತ್ತು ಕೊಚ್ಚಿನ್ ನಗರಗಳ ಮಾದರಿಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಈ ಯೋಜನೆ ಅನುಷ್ಠಾನವಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಿಗೆ ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಮಾಹಿತಿ ನೀಡಲು ಮನಪಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರದೇಶಾಭಿವೃದ್ಧಿ ಯೋಜನೆಯಡಿ ಹಳೇ ಮಂಗಳೂರು ವ್ಯಾಪ್ತಿಯ 8 ವಾರ್ಡ್‌ಗಳಲ್ಲಿ 65 ಯೋಜನೆಗಳು ಅನುಷ್ಠಾನಗೊಳ್ಳಲಿವೆ. ನಗರ ಪಾಲಿಕೆಯ ಉದ್ದೇಶಿತ ಯೋಜನೆಗಳಾದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಪಂಪ್‌ವೆಲ್ ಬಸ್ ನಿಲ್ದಾಣ, ಸೆಂಟ್ರಲ್ ಮಾರ್ಕೆಟ್ ಅಭಿವೃದ್ಧಿ ಮುಂತಾದ ಕಾಮಗಾರಿಗಳು ಸ್ಮಾರ್ಟ್ ಸಿಟಿಯಡಿ ಅನುಷ್ಠಾನಗೊಳ್ಳಲಿವೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಬಗ್ಗೆ ಪಾಲಿಕೆ ಸದಸ್ಯರಿಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಇಲ್ಲಿನ ಕಾಮಗಾರಿಗಳು ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ. ಈಗಾಗಲೇ ಅಭಿವೃದ್ಧಿಯಾದ ಮೈದಾನ ರಸ್ತೆಗೆ ಮತ್ತೆ 7 ಕೋಟಿ ರೂ. ಖರ್ಚು ಮಾಡುವ ಅವಶ್ಯಕತೆ ಏನಿದೆ ಎಂದು ಸದಸ್ಯರಾದ ಮಹಾಬಲ ಮಾರ್ಲ, ಹರಿನಾಥ್, ಎ.ಸಿ.ವಿನಯರಾಜ್, ನವೀನ್ ಡಿಸೋಜ, ಅಪ್ಪಿ ಮುಂತಾದವರು ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆ ಅನುಷ್ಠಾನ ಹಂತದಲ್ಲಿ ಸಲಹೆ ಪಡೆಯದೆ ಈ ಸಭೆ ನಡೆಸುವ ಔಚಿತ್ಯ ಏನೆಂದು ರೂಪಾ ಡಿ. ಬಂಗೇರ ಪ್ರಶ್ನಿಸಿದರು.ಮೇಯರ್ ಕೆ.ಭಾಸ್ಕರ್, ಉಪ ಮೇಯರ್ ಕೆ.ಮಹಮ್ಮದ್, ಆಯುಕ್ತ ಮಹಮ್ಮದ್ ನಜೀರ್ ಉಪಸ್ಥಿತರಿದ್ದರು…….