Breaking News

ಜಿಪಂ ಅಧ್ಯಕ್ಷ-ಉಪಾಧ್ಯಕ್ಪರ ರಾಜೀನಾಮೆ..?

ಒಳ ಒಪ್ಪಂದ ಮುಗಿದ ಲೆಕ್ಕಾಚಾರ....

SHARE......LIKE......COMMENT......

ಕೊಪ್ಪಳ: 

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ರಾಜೀನಾಮೆ ಪ್ರಹಸನದ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಒಳ ಒಪ್ಪಂದದ ಲೆಕ್ಕಾಚಾರದಂತೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸುತ್ತಾರೆ ಎನ್ನಲಾಗುತ್ತಿದ್ದರೂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮಾತ್ರ ಇದೆಲ್ಲ ಸುಳ್ಳು ಎನ್ನುವ ಮಾತನ್ನಾಡಿದ್ದಾರೆ.

ಯೆಸ್ 2016ರಲ್ಲಿ ನಡೆದ ಜಿಪಂ ಪಂಚಾಯಿತಿ ಚುನಾವಣೆ ನಡೆದಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುತವಿದೆ. ಆರಂಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಎಸ್‌.ಬಿ. ನಾಗರಳ್ಳಿ ಅವರು ಒಂದು ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನದ ದರ್ಬಾರ್‌ ನಡೆಸಿ ಏಕಾಏಕಿ ಬೆಂಗಳೂರಿಗೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದಾದ ಬೆನ್ನಲ್ಲೇ ರಾಜಶೇಖರ ಹಿಟ್ನಾಳ ಅವರನ್ನು ಅಧ್ಯಕ್ಷ ಸ್ಥಾನದ ಪಟ್ಟಕ್ಕೇರಿಸಲಾಗಿತ್ತು. ಆದರೆ ಉಪಾಧ್ಯಕ್ಷರಾಗಿದ್ದ ಲಕ್ಷ್ಮವ್ವ ನೀರಲೂಟಿ ಅವರು ತಮ್ಮ ಸ್ಥಾನದಲ್ಲೇ ಮುಂದುವರಿದಿದ್ದರು. ತಲಾ 30 ತಿಂಗಳು ಸ್ಥಾನ ಹಂಚಿಕೆಯ ಒಳ ಒಪ್ಪಂದ ನಡೆದಿತ್ತು ಎನ್ನಲಾಗಿದೆ.

ಜಿಪಂನಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದೆ. ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡನ್ನೂ ಐದು ವರ್ಷದಲ್ಲಿ ತಲಾ ಎರಡೂವರೆ ವರ್ಷ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಜಿಪಂ ಕ್ಷೇತ್ರದ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕೆಂದು ಒಳ ಒಪ್ಪಂದ ನಡೆದಿತ್ತು ಎನ್ನಲಾಗಿದೆ. ಈ ಹಿಂದೆ ಸಚಿವರಾಗಿದ್ದ ಶಿವರಾಜ ತಂಗಡಗಿ, ಶಾಸಕರಾಗಿದ್ದ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ ಹಾಗೂ ಅಮರೇಗೌಡ ಬಯ್ನಾಪೂರ ಅವರ ನೇತೃತ್ವದಲ್ಲೇ ಎರಡೂವರೆ ವರ್ಷ ಕೊಪ್ಪಳಕ್ಕೆ ಅಧ್ಯಕ್ಷ ಸ್ಥಾನ, ಗಂಗಾವತಿಗೆ ಉಪಾಧ್ಯಕ್ಷ ಸ್ಥಾನ ಹಂಚಿಕೆ ಮಾಡುವ ಮಾತಾಗಿತ್ತಂತೆ. ಹಾಗಾಗಿ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಗಂಗಾವತಿ ಜಿಪಂ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಆದರೆ ಅಧ್ಯಕ್ಷ ರಾಜಶೇಖರ ಹಿಟ್ನಾಳ ಇದನ್ನು ಸಂಪೂರ್ಣ ಅಲ್ಲಗಳೆದಿದ್ದಾರೆ. ಒಂದು ವೇಳೆ ರಾಜಕೀಯ ಏರಿಳಿತದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು ರಾಜೀನಾಮೆ ಕೊಟ್ಟಿದ್ದೇ ಆದರೆ ಗಂಗಾವತಿ ತಾಲೂಕಿನ ಜಿಪಂ ಸದಸ್ಯ ವಿಶ್ವನಾಥರಡ್ಡಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನ ಕೊಪ್ಪಳದ ಪಾಲಾಗಲಿದೆ ಎನ್ನವು ಚರ್ಚೆ ಮತ್ತೊಂದು ಕಡೆ ನಡೆದಿದೆ. ಈ ರಾಜೀನಾಮೆ ಪ್ರಹಸನ ಕಳೆದ ಹಲವು ದಿನಗಳಿಂದ ಕೇಳಿ ಬಂದು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ನಾನು ರಾಜೀನಾಮೆ ಕೊಡುತ್ತೇನೆ ಎನ್ನುವುದು ಸುಳ್ಳು. ಸದ್ಯಕ್ಕೆ ನಾನಂತೂ ರಾಜೀನಾಮೆ ಕೊಡುತ್ತಿಲ್ಲ. ಉಪಾಧ್ಯಕ್ಷರು ರಾಜೀನಾಮೆ ಕೊಡುತ್ತಾರೆ ಎನ್ನುವ ಮಾಹಿತಿಯಿತ್ತು. ಅವರು ಈ ವರೆಗೂ ರಾಜೀನಾಮೆ ಕೊಟ್ಟಿಲ್ಲ. ಮುಂದೆ ಲೋಕಸಭೆ ಚುನಾವಣೆಯಿದೆ. ಹಾಗಾಗಿ ಚುನಾವಣೆ ನಡೆದ ಬಳಿಕ ಇವೆಲ್ಲ ನಡೆಯಬಹುದು ಎಂದರು…..