ಹಟ್ಟಿ ಚಿನ್ನದ ಗಣಿ:
ಉತ್ತರ ಕರ್ನಾಟಕದ ಜೀವ ನಾಡಿ,ಲಕ್ಷಾಂತರ ಹೆಕ್ಟೇರ್ ಪ್ರದೇಶದ ಭೂಮಿ ಹಸಿರಾಗಲು ಈಕೆಯೇ ಆಸರೆ ವಿದ್ಯುತ್ ಉತ್ಪಾದನೆಗೆ ಆಧಾರ ಸ್ತಂಭವಾಗಿದೆ. ಜನರ ಬಾಳು ಬೆಳಗಲು ಅನ್ನ, ನೀರು, ಬೆಳಕು ನೀಡಿ ಸಲಹುವ ಕೃಷ್ಣ ನದಿ ಇಲ್ಲೊಂದು ಸ್ಥಳದಲ್ಲಿ ಮಾತ್ರ ಗದ್ದಲವಿಲ್ಲದೆ ಪ್ರಶಾಂತ ಚಿತ್ತದಿಂದ ಹರಿಯುತ್ತಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದ ಮಹಾಬಲೇಶ್ವರ ಕೃಷ್ಣ ನದಿ ಉಗಮ ಸ್ತಾನ. ಕರ್ನಾಟಕದಲ್ಲಿ 483 ಕಿಮೀ ಉದ್ದ ಹರಿಯುತ್ತದೆ. ಅದರ ಒಟ್ಟು ಉದ್ದ 1392 ಕಿಮೀ. ದಕ್ಷಿಣ ಭಾರತದಲ್ಲೇ 2ನೇ ಅತಿ ದೊಡ್ಡ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನಲ್ಲಿ ನದಿ ಹರಿದು ಹೋಗುತ್ತದೆ. ಆದರೆ ಸಮೀಪದ ತಿಂಥಣಿ ಸೇತುವೆ ಬಳಿಯಲ್ಲಿ ಅಂದಾಜು 2 ಕಿಮೀ. ದೂರದವರೆಗೆ ಎಂತಹುದೆ ಪ್ರವಾಹ ಉಕ್ಕಿ ಬರಲಿ ನದಿ ಮಾತ್ರ ಸದ್ದು ಗದ್ದಲ ಮಾಡದೆ ಹರಿಯುತ್ತದೆ. ಶಬ್ದ ಮಾಡದೇ ಧುಮ್ಮಿಕ್ಕುವ ನದಿ ಮಹಿಮೆ ಮಾತ್ರ ಬಿಡಿಸಲಾಗದ ಗಂಟಾಗಿದೆ. ಈ ಪ್ರದೇಶ ಹೊರತುಪಡಿಸಿ ನದಿ ಹರಿಯುವ ಸ್ಥಳದಲ್ಲಿ ಭೋರ್ಗೆರೆಯುವ ಸದ್ದು ಕಿವಿಗೆ ಅಪ್ಪಳಿಸುತ್ತದೆ.
ಅಲ್ಲದೇ ಕೃಷ್ಣ ನದಿ ಹರಿಯುವ ಸದ್ದಿನ ರಭಸ ತಿಳಿದು ಜನರು ನೀರಿನ ಮಟ್ಟ ಅಂದಾಜು ಮಾಡುತ್ತಾರೆ. ಮುಂದೆ ನಾಲ್ಕಾರು ಕಿಮೀ ಚಲಿಸಿದರೆ ತಿಂಥಣಿ ಮೌನೇಶ್ವರರ ಶಾಸಕ ಕಟ್ಟೆ ಇದೆ. ಅಲ್ಲಿಯೇ ಮಾಧವ ತೀರ್ಥರ ತಪಸ್ಸು ಮಾಡಿದ ಸ್ತಳವಿದೆ. ಮುಂದೆ ಲಿಂಗದಹಳ್ಳಿ ರಾಮದಾಸರ ಬೃಂದಾವನವಿದೆ. ನದಿ ಎಡದಂಡೆಯಲ್ಲಿ ಮೌನೇಶ್ವರರರು ಐಕ್ಯವಾದ ಸ್ತಳವಿದೆ. ಇದರಿಂದ ಕೃಷ್ಣ ನದಿ ತಟದ ಎರಡು ಕಡೆ ತೀರ್ಥರು, ಶರಣ ಸಂತರು ನೆಲೆಸಿದ ನಾಡಾಗಿದ್ದು, ಅನೇಕರು ತಪಸ್ಸು ಮಾಡಿದ ಪುಣ್ಯ ಸ್ತಳವಾಗಿದೆ. ಈ ಭಾಗದಲ್ಲಿ ಅನೇಕ ಶರಣ ಸಂತರು ತಪಸ್ಸು ಮಾಡಿದ್ದಾರೆ.ಪುಣ್ಯ ಪುರುಷರು ತಪಸ್ಸು ಮಾಡುವಾಗ ಕೃಷ್ಣ ನದಿಯಲ್ಲಿ ಎಷ್ಟೆ ಪ್ರವಾಹ ಉಕ್ಕಿ ಬಂದರೂ ತಪಸ್ಸಿಗೆ ಭಂಗವಾಗದಿರಲಿ ಎಂಬ ಕಾರಣಕ್ಕೆ ಕೃಷ್ಣೆ ಇಲ್ಲಿ ಮೌನ ತರಂಗಿಣಿಯಾಗಿದ್ದಾಳೆ ಎನ್ನುತ್ತಾರೆ ಸಿದ್ದಿ ಪುರುಷರು…