ಬೆಂಗಳೂರು:
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೆ ಅರ್ಜುನ್ ಸರ್ಜಾ ವಿರುದ್ಧ ಕಿಡಿಕಾರಿದ್ದಾರೆ.
ಮಲ್ಲೇಶ್ವರಂ ರೇಣುಕಾಂಬ ಥಿಯೇಟರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರುತಿ ಹರಿಹರನ್ ಅವರು, ನಾನು ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಕ್ಕೆ ಬದ್ಧವಾಗಿದ್ದೇನೆ ಎಂದರು. ಘಟನೆ ನಡೆದಾಗ ನನಗೆ ಹೇಳಿಕೊಳ್ಳುವಷ್ಟು ಧೈರ್ಯ ಇರಲಿಲ್ಲ. ಈಗ ಧೈರ್ಯ ಬಂದಿದೆ. ಹೀಗಾಗಿ ನಾನು ಮಾಧ್ಯಮದ ಮುಂದೆ ಬಂದಿದ್ದೇನೆ.
ಇದೇ ವೇಳೆ ನಾನು ಪಬ್ಲಿಸಿಟಿಗೋಸ್ಕರ ಸರ್ಜಾ ವಿರುದ್ಧ ಆರೋಪ ಮಾಡುತ್ತಿಲ್ಲ ಎಂದರು.ಚಿತ್ರರಂಗದಲ್ಲಿ ನಾನು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇನೆ. ಇನ್ನು ಸಾಕಷ್ಟು ಜನರ ಜೊತೆ ನಾನು ಕೆಲಸ ಮಾಡಿದ್ದೇನೆ. ಆದರೆ ಈ ರೀತಿ ಯಾರು ನನ್ನ ಜೊತೆ ನಡೆದುಕೊಂಡಿರಲಿಲ್ಲ ಎಂದು ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ವಾಗ್ದಾಳಿ ನಡೆಸಿದ್ದಾರೆ.
ಅರ್ಜುನ್ ಸರ್ಜಾ ಅವರು ನನ್ನನ್ನು ಡಿನ್ನರ್ ಗೆ ಬಾ. ರೆಸಾರ್ಟ್ ಗೆ ಬಾ ಎಂದು ಕರೆದಿದ್ದರು. ಅವರು ಕರೆದ ಶೈಲಿ ಅನೈತಿಕವಾಗಿತ್ತು. ಮನಸ್ಸಿನಲ್ಲಿ ಯಾವುದೇ ದುರುದೇಷವಿಟ್ಟುಕೊಂಡು ಕರೆಯುತ್ತಿದ್ದಾರೆ ಎಂದು ನನಗೆ ಅನಿಸಿತ್ತು ಎಂದು ಹೇಳಿದ್ದಾರೆ.ನನಗೆ ಸರ್ಜಾ ಫ್ಯಾನ್ಸ್ ಕ್ಲಬ್ ನಿಂದ ಸಾಕಷ್ಟು ಬೆದರಿಕೆ ಕರೆಗಳು ಬರುತ್ತೀವೆ. ಆದರೆ ಅರ್ಜುನ್ ಸರ್ಜಾ ಅವರ ಕುಟುಂಬದವರಿಂದ ಯಾವು ಕರೆಗಳು ಬಂದಿಲ್ಲ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ……