Breaking News

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ..!

ಉ. ಕ. ಜಿಲ್ಲೆ ಅಧಿಕಾರಿಗಳಿಲ್ಲದೇ ಸೊರಗುತ್ತಿದೆ....

SHARE......LIKE......COMMENT......

ಶಿರಸಿ:

ಉತ್ತರಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಷ್ಠಾನ ಅಧಿಕಾರಿಗಳಿಲ್ಲದೇ ಸೊರಗುತ್ತಿದೆ. ಜಿಲ್ಲೆಯ 11 ತಾಲೂಕುಗಳಲ್ಲಿ ಕೇವಲ ಇಬ್ಬರು ಸಿಡಿಪಿಒಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. ಇನ್ನೂ 9 ಹುದ್ದೆಗಳು ಅಧಿಕಾರಿಗಳಿಲ್ಲದೆ ಖಾಲಿ ಉಳಿದಿವೆ.

ಪ್ರತಿ ತಾಲೂಕಿಗೆ ಒಬ್ಬರಂತೆ ಒಟ್ಟು 11 ಸಿಡಿಪಿಒಗಳ ಅಗತ್ಯವಿದ್ದರೂ ಅಧಿಕೃತವಾಗಿ ಕೇವಲ 2 ಸಿಡಿಪಿಒಗಳು ಮಾತ್ರ ಇದ್ದಾರೆ. ಉಳಿದ ಕಡೆಗಳಲ್ಲಿ ಕಿರಿಯ ಅಧಿಕಾರಿಗಳೇ ಪ್ರಭಾರಿ ಅಧಿಕಾರಿಗಳಾಗಿ ಹುದ್ದೆಯನ್ನು ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರಮುಖ ಯೋಜನೆಗಳಾದ ಮಾತೃಪೂರ್ಣ, ಅಂಗನವಾಡಿ ನಿರ್ವಹಣೆಗಳಲ್ಲಿ ಏರುಪೇರು ಆಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳಾವುದೂ ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಆಹಾರ, ಚುಚ್ಚು ಮದ್ದು, ಮಾತೃಪೂರ್ಣ, ಯಾವುದೂ‌ ಜಿಲ್ಲೆಯಲ್ಲಿ ಸರಿಯಾಗಿ ಸಿಗುತ್ತಿಲ್ಲ. ಅಂಗನವಾಡಿ ನೋಡಿಕೊಂಡು ಹೋಗುವವರೇ ಸಿಡಿಪಿಒ ಆಗಿದ್ದಾರೆ. ಅಲ್ಲದೇ ಆಹಾರವೂ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಜಿಲ್ಲೆಯ 2 ಸಾವಿರಕ್ಕೂ ಮೇಲ್ಪಟ್ಟು ಅಂಗನವಾಡಿಗಳು ಸರಿಯಾಗಿ ನಡೆಯಲು ಎಲ್ಲಾ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜಿಲ್ಲಾ ಪಂಚಾಯತ್​ ಸದಸ್ಯೆ ಉಷಾ ಹೆಗಡೆ ಒತ್ತಾಯಿಸಿದ್ದಾರೆ.

ಒಂದೊಮ್ಮೆ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಉಗ್ರವಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗುತ್ತದೆ ಎಂದು ಉಷಾ ಎಚ್ಚರಿಸಿದ್ದಾರೆ. ಇನ್ನು ಶಿರಸಿ ತಾಲೂಕಿನ ಸುಮಾರು 250ಕ್ಕೂ ಅಧಿಕ ಅಂಗನವಾಡಿಗಳೂ ಸಹ ಇದೇ ಪರಿಸ್ಥಿತಿಯಲ್ಲಿದ್ದು, ಯೋಜನೆಗಳು ಅನುಷ್ಠಾನವಾಗಲು ಬೇಕಾದ ಅಧಿಕಾರಿಗಳ ನೇಮಕ ಶೀಘ್ರದಲ್ಲಿ ಆಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ…..