ದೋಹಾ:
ಮರುಭೂಮಿ ನಗರ ಕತಾರ್ನಲ್ಲಿ ಶನಿವಾರ ಒಂದೇ ದಿವಸದಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಚ್ಚರಿಯೆಂದರೆ ವರ್ಷಪೂರ್ತಿ ಬೀಳುವ ಮಳೆಯ ಪ್ರಮಾಣ ನಿನ್ನೆ ಒಂದೇ ದಿನದಲ್ಲಿ ಬಿದ್ದಿದೆ.
ರಸ್ತೆಗಳೆಲ್ಲಾ ಜಲಾವೃತವಾಗಿ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ. ಅನೇಕ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಗೆ ಒಳಗಾಗಿದ್ದು, ಹಲವು ಅಂಗಡಿ ಹಾಗೂ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
ಕತಾರ್ ರಾಜಧಾನಿ ದೋಹಾದಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು, ಒಂದು ವರ್ಷದಲ್ಲಿ ಬೀಳುವ ಪ್ರಮಾಣ ಒಂದೇ ದಿನದಲ್ಲಿ ದಾಖಲಾಗಿದೆ ಎಂದು ಇಲ್ಲಿನ ಹವಾಮಾನ ಶಾಸ್ತ್ರಜ್ಞರಾದ ಸ್ಟೆಫ್ ಗೌಲ್ಟರ್ ಟ್ವೀಟ್ ಮಾಡಿದ್ದಾರೆ.
ಕತಾರ್ನ ಕೆಲವು ವಿಮಾನಗಳ ಮಾರ್ಗವನ್ನು ಬಲವಂತವಾಗಿ ಬದಲಾವಣೆ ಮಾಡಲಾಗಿದ್ದು, ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ. ಪ್ರವಾಹದಿಂದ ಉಂಟಾದ ಸುರಂಗಗಳನ್ನು ಅರಿತುಕೊಂಡು ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ದೋಹಾದಲ್ಲಿ ಸೃಷ್ಟಿಯಾದ ಚಂಡಮಾರುತಕ್ಕೆ ಹಲವು ಕಾರುಗಳು ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಕಟ್ಟಡದ ಒಳಗೆ ನೀರು ನುಗ್ಗಿ ಕೆಲಸಗಾರರು ಪರದಾಡಿದ್ದಾರೆ…..