Breaking News

ಸಿಎಂ ಯಡಿಯೂರಪ್ಪ ನಡೆಗೆ ಸಚಿವ ಶ್ರೀರಾಮುಲು ಅಸಮಾಧಾನ..!

ಆರೋಗ್ಯ ಖಾತೆ ಏಕಾಏಕಿ ಬದಲಾವಣೆ....

SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದ ದಿನದಿಂದಲೂ ಆರೋಗ್ಯ ಖಾತೆ ಅಧಿಕಾರದ ಕುರಿತು ಸಚಿವರಾದ ಶ್ರೀರಾಮುಲು ಮತ್ತು ಕೆ. ಸುಧಾಕರ್​ ನಡುವೆ ಹಗ್ಗಾಜಗ್ಗಾಟ ನಡೆಯುತ್ತಲೇ ಇತ್ತು. ಈ ನಡುವೆ ನಿನ್ನೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸಚಿವ ಬಿ. ಶ್ರೀರಾಮುಲು ಅವರ ಖಾತೆಯನ್ನು ಕೊನೆಗೂ ಬದಲಾಯಿಸಿದ್ದಾರೆ. ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಸಚಿವ ಬಿ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹಿಂದೆ ಸಮಾಜ ಕಲ್ಯಾಣ ಖಾತೆ ಸಚಿವ ಗೋವಿಂದ ಕಾರಜೋಳ ಬಳಿಯಿತ್ತು. ಈಗ ಡಿಸಿಎಂ ಅವರ ಬಳಿ ಕೇವಲ ಲೋಕೋಪಯೋಗಿ ಇಲಾಖೆ ಹೊಣೆ ಮಾತ್ರ ಇದೆ. ಆದರೆ, ಸಿಎಂ ಯಡಿಯೂರಪ್ಪ ಏಕಾಏಕಿ ತಮ್ಮ ಖಾತೆಯನ್ನು ಬದಲಿಸಿರುವ ಕುರಿತು ಸಚಿವ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಕೊರೋನಾ ಸಂಕಷ್ಟ ಕಾಲದಲ್ಲಿ ಸಚಿವ ಬಿ ಶ್ರೀರಾಮುಲು ಅವರು ಖಾತೆ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು. ಕೊರೋನಾ ನಿರ್ವಹಣೆಯಲ್ಲಿ ಕೆ ಸುಧಾಕರ್​ ಹೆಚ್ಚಿನ ಜವಾಬ್ದಾರಿ ಹೊತ್ತಿದ್ದಕ್ಕೆ ಶ್ರೀರಾಮುಲು ಅಸಮಾಧಾನವನ್ನು ಹೊರಹಾಕಿದ್ದರು. ಇಬ್ಬರು ನಡುವಿನ ಈ ಗುದ್ದಾಟ ರಾಜ್ಯದ ಜನತೆ ಮುಂದೆ ಕೂಡ ಬಹಿರಂಗವಾಗಿತ್ತು. ಬಳಿಕ ಇದಕ್ಕೆ ತೇಪೆ ಹಚ್ಚಲು ಮುಂದಾದ ಸುಧಾಕರ್​, ಶ್ರೀರಾಮುಲು ಅಣ್ಣ ನನ್ನ ನಡುವೆ ಯಾವುದೇ ಮುನಿಸಿಲ್ಲ ಎಂದಿದ್ದರು. ಆದರೆ, ಇದೇ ಕಾರಣಕ್ಕೆ ರಾಮುಲು ಅವರ ಸ್ಥಾನವನ್ನು ಬದಲಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ, ಈ ಕುರಿತು ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಶ್ರೀರಾಮುಲು, “ಕೋವಿಡ್ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬಾರದಿತ್ತು. ಕೋವಿಡ್ ಕಡಿಮೆ ಆದ ಮೇಲೆ ಬದಲಿಸಬೇಕಿತ್ತು. ಸಿಎಂ ಅವರ ಈ ನಿರ್ಧಾರದಿಂದಾಗಿ ಇದೀಗ ಆರೋಗ್ಯ ಇಲಾಖೆ ನಿರ್ವಹಿಸುವಲ್ಲಿ ನಾನು ಅಸಮರ್ಥ ಎಂಬ ಸಂದೇಶ ರಾಜ್ಯದ ಜನತೆಗೆ ರವಾನೆಯಾಗಲಿದೆ. ಅಲ್ಲದೆ, ನಾನು ಕೇಳಿದಾಗ ನನಗೆ ಸಮಾಜ ಕಲ್ಯಾಣ ಖಾತೆ ನೀಡಿರಲಿಲ್ಲ. ಆದರೆ, ಇದೀಗ ಏಕಾಏಕಿ ಬದಲಿಸಿರುವುದು ಸರಿಯಲ್ಲ. ಈ ಸಂಬಂಧ ಸಿಎಂ ಜೊತೆ ಶೀಘ್ರದಲ್ಲೇ ಚರ್ಚಿಸುತ್ತೇನೆ” ಎಂದು ಶ್ರೀರಾಮುಲು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಏಕಾಏಕಿ ಜವಾಬ್ದಾರಿ ಬದಲಿಸಿರುವುದು ಜನರ ನಡುವೆ ತನ್ನ ಬಗ್ಗೆ ಕೆಟ್ಟ ಮಾಹಿತಿ ರವಾನೆಯಾಗುತ್ತದೆ ಎಂಬುದು ಸಚಿವ ಶ್ರೀರಾಮುಲು ಅವರ ಅಂಬೋಣ……