Breaking News

ಐಪಿಎಲ್ ಎರಡನೇ ಎಲಿಮಿನೇಟರ್‌ ಪಂದ್ಯಕ್ಕೆ ಕ್ಷಣಗಣನೆ..!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ....

SHARE......LIKE......COMMENT......

ಅಹಮದಾಬಾದ್:

ಕಳೆದ ವಾರ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು (Royal Challengers Bangalore) 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬೀಳುವ ಆತಂಕದಲ್ಲಿತ್ತು. ಆದರೆ ಡೆಲ್ಲಿ ವಿರುದ್ಧ ಮುಂಬೈ ಗೆದ್ದಿದ್ದರಿಂದ ಪ್ಲೇ-ಆಫ್‌ಗೆ ಪ್ರವೇಶ ಪಡೆದ ಆರ್‌ಸಿಬಿ, ತನಗೆ ಸಿಕ್ಕ ಅವಕಾಶವನ್ನು ಎಲಿಮಿನೇಟರ್‌ ಪಂದ್ಯದಲ್ಲಿ ಉಪಯೋಗಿಸಿಕೊಂಡಿದೆ. ಶುಕ್ರವಾರ ನಡೆಯಲಿರುವ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸೆಣಸಲಿರುವ ಆರ್‌ಸಿಬಿ, ಫೈನಲ್‌ಗೆ ಲಗ್ಗೆಯಿಡಲು ಕಾಯುತ್ತಿದೆ.

ಧೈರ್ಯವಾಗಿ ಸವಾಲುಗಳನ್ನು ಎದುರಿಸುತ್ತಿರುವ ಆರ್‌ಸಿಬಿಗೆ ಅದೃಷ್ಟವೂ ಕೈಹಿಡಿಯುತ್ತಿದೆ. ತಂಡದ ಪ್ರಮುಖ ಬೌಲರ್‌ ಹರ್ಷಲ್‌ ಪಟೇಲ್‌ (Harshal Patel) ಕೈ ಗಾಯದಿಂದ ಚೇತರಿಸಿಕೊಂಡಿದ್ದಾರೆ. ನಿರ್ಣಾಯಕ ಹಂತದಲ್ಲಿ ರಜತ್‌ ಪಾಟಿದಾರ್‌ ಹೀರೋ ಆಗಿ ಬದಲಾಗಿದ್ದಾರೆ. ದಿನೇಶ್‌ ಕಾರ್ತಿಕ್‌ ತಮ್ಮ ಲಯ ಮುಂದುವರಿಸಿದ್ದು, ಆರ್‌ಸಿಬಿ ಪ್ರಶಸ್ತಿ ಕನಸಿಗೆ ಜೀವ ತುಂಬಿದ್ದಾರೆ.

ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ಫೈನಲ್‌ನಲ್ಲಿ ಸೆಣಸುವ ಅವಕಾಶ ಮತ್ತು ಆರ್‌ಸಿಬಿ (RCB) ಮಧ್ಯೆ ನಿಂತಿರುವುದು ರಾಜಸ್ಥಾನ. ನಿರ್ಣಾಯಕ ಹಂತದಲ್ಲಿ ರಾಯಲ್ಸ್‌ ಸ್ವಲ್ಪ ಮಟ್ಟಿಗೆ ಲಯ ಕಳೆದುಕೊಂಡಂತಿದೆ. ಕ್ವಾಲಿಫೈಯರ್‌-1ನಲ್ಲಿ ಟೈಟಾನ್ಸ್‌ ವಿರುದ್ಧ ತಂಡದ ಲೆಕ್ಕಾಚಾರಗಳು ತಲೆಕೆಳಗಾದವು. ಜೋಸ್‌ ಬಟ್ಲರ್‌ ಸ್ಟ್ರೈಕ್‌ ರೇಟ್‌ ಕುಸಿದಿದೆ. ನಾಯಕ ಸಂಜು ಸ್ಯಾಮ್ಸನ್‌ 30-40 ರನ್‌ ದಾಟುತ್ತಿಲ್ಲ. ಶಿಮ್ರೊನ್‌ ಹೆಟ್ಮೇಯರ್‌ರ ನಂತರ ಸ್ಫೋಟಕ ಬ್ಯಾಟರ್‌ಗಳ ಕೊರತೆ ಇದೆ. ಆರ್‌.ಅಶ್ವಿನ್‌ ಮತ್ತು ಪ್ರಸಿದ್ಧ್ ಕೃಷ್ಣ ದುಬಾರಿಯಾಗುತ್ತಿದ್ದಾರೆ. ಜೊತೆಗೆ ವಿಕೆಟ್‌ ಕೀಳುವಲ್ಲೂ ಹಿಂದೆ ಬಿದ್ದಿದ್ದಾರೆ. ಇವೆಲ್ಲಾ ಅಂಶಗಳು ಆರ್‌ಸಿಬಿಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಬಹುದು.

ಐಪಿಎಲ್‌ ಹಬ್ಬ ಈಗ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದ್ದು, ಇಲ್ಲಿನ ನರೇಂದ್ರ ಮೋದಿ (ಮೊಟೇರಾ) ಸ್ಟೇಡಿಯಂ ಈ ಹಿಂದೆ ರಾಜಸ್ಥಾನದ ತವರು ಮೈದಾನವಾಗಿತ್ತು. ಇಲ್ಲಿ ತಂಡ ಆಡಿರುವ 12 ಪಂದ್ಯಗಳಲ್ಲಿ 7ರಲ್ಲಿ ರಾಜಸ್ಥಾನ ರಾಯಲ್ಸ್‌ ಗೆದ್ದಿದೆ.

ಹಸರಂಗ vs ಸ್ಯಾಮ್ಸನ್‌ ಫೈಟ್‌:

ಸ್ಯಾಮ್ಸನ್‌ಗೆ ಮತ್ತೆ ಹಸರಂಗ ಭೀತಿ ಕಾಡಲಿದೆ. ಟಿ20ಯಲ್ಲಿ 6 ಇನ್ನಿಂಗ್ಸ್‌ಗಳಲ್ಲಿ ಸ್ಯಾಮ್ಸನ್‌, ಹಸರಂಗಗೆ 5 ಬಾರಿ ಔಟ್‌ ಆಗಿದ್ದಾರೆ. 23 ಎಸೆತಗಳಲ್ಲಿ ಕೇವಲ 18 ರನ್‌ ಗಳಿಸಿದ್ದಾರೆ. ಮೊಹಮದ್‌ ಸಿರಾಜ್‌ ಸಹ ಸ್ಯಾಮ್ಸನ್‌ರನ್ನು 2 ಬಾರಿ ಔಟ್‌ ಮಾಡಿದ್ದು 21 ಎಸೆತಗಳಲ್ಲಿ ಕೇವಲ 20 ರನ್‌ ಬಿಟ್ಟುಕೊಟ್ಟಿದ್ದಾರೆ. ಇದೇ ವೇಳೆ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ಗೆ ಕಾರ್ತಿಕ್‌ ಟಿ20ಯಲ್ಲಿ 3 ಬಾರಿ ವಿಕೆಟ್‌ ನೀಡಿದ್ದು, 12.66ರ ಸರಾಸರಿ ಹೊಂದಿದ್ದಾರೆ. ಹೀಗಾಗಿ ನಾಯಕ ಸ್ಯಾಮ್ಸನ್‌, ಚಹಲ್‌ರ ಕನಿಷ್ಠ 2 ಓವರ್‌ಗಳನ್ನು ಡೆತ್‌ ಓವರ್‌ಗಳಿಗೆ ಮೀಸಲಿಡುವ ಸಾಧ್ಯತೆ ಇದೆ.

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಕೊಂಚ ಮೇಲುಗೈ ಸಾಧಿಸಿದೆ. 26 ಪಂದ್ಯಗಳ ಪೈಕಿ ಆರ್‌ಸಿಬಿ ತಂಡವು 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು 11 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು 2 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ.

ಪಿಚ್‌ ರಿಪೋರ್ಚ್‌:

2021ರಿಂದ ಈ ವರೆಗೂ ಇಲ್ಲಿ 6 ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಗಳು ಗೆದ್ದಿದ್ದು, 11ರಲ್ಲಿ ಗುರಿ ಬೆನ್ನತ್ತಿದ ತಂಡಗಳು ಜಯಿಸಿವೆ. ಹೀಗಾಗಿ ಟಾಸ್‌ ನಿರ್ಣಾಯಕವೆನಿಸಿದೆ. ಸಂಜೆ ಬಳಿಕ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿದ್ದು, ಮೊದಲು ಬ್ಯಾಟ್‌ ಮಾಡುವ ತಂಡ 180-190 ರನ್‌ ಕಲೆಹಾಕಿದರಷ್ಟೇ ರಕ್ಷಿಸಿಕೊಳ್ಳುವ ಸಾಧ್ಯತೆ ಇರಲಿದೆ.

ಸಂಭವನೀಯ ಆಟಗಾರರ ಪಟ್ಟಿ:

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಹಿಪಾಲ್ ಲೊಮ್ರಾರ್‌, ಶಾಬಾಜ್ ಅಹಮ್ಮದ್‌, ದಿನೇಶ್ ಕಾರ್ತಿಕ್‌, ವನಿಂದು ಹಸರಂಗ, ಹರ್ಷಲ್ ಪಟೇಲ್‌, ಜೋಶ್ ಹೇಜಲ್‌ವುಡ್‌, ಮೊಹಮ್ಮದ್ ಸಿರಾಜ್‌.

ರಾಜಸ್ಥಾನ ರಾಯಲ್ಸ್‌: ಜೋಸ್ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌(ನಾಯಕ), ದೇವದತ್ ಪಡಿಕ್ಕಲ್‌, ಶಿಮ್ರೊನ್ ಹೆಟ್ಮೇಯರ್‌, ರಿಯಾನ್ ಪರಾಗ್‌, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಯುಜುವೇಂದ್ರ ಚಹಲ್‌, ಒಬೆಡ್ ಮೆಕಾಯ್‌, ಪ್ರಸಿದ್ಧ್ ಕೃಷ್ಣ…..

ಸ್ಥಳ: ಅಹಮದಾಬಾದ್‌, ಮೋದಿ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌