ಹುಬ್ಬಳ್ಳಿ:
ಕಳೆದ ತಿಂಗಳು ಬೆಳ್ಳಂಬೆಳಗ್ಗೆ ರೌಡಿಗಳ ಮನೆಗೆ ನುಗ್ಗಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ.. ಹು-ಧಾ ಮಹಾನಗರ ಪೊಲೀಸರು, ಭಾನುವಾರ ಮಧ್ಯರಾತ್ರಿ ಅವಳಿ ನಗರದ 36 ಕಡೆಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿ, 11 ಜನರನ್ನು ಬಂಧಿಸಿದ್ದಾರೆ.
ಗಾಂಜಾ ಕುಳಗಳನ್ನು ಮಟ್ಟಹಾಕುವ ಉದ್ದೇಶದಿಂದ ಡಿಸಿಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ. ಆ ತಂಡ ಅವಳಿ ನಗರದ ಮಾಜಿ, ಹಾಲಿ ಹಾಗೂ ಶಂಕಾಸ್ಪದ ಗಾಂಜಾ ಮಾರಾಟಗಾರರ ಮನೆ ಮತ್ತು ಅಡ್ಡೆಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿತು. ಹಳೇ ಹುಬ್ಬಳ್ಳಿಯ ಮಹಮ್ಮದ ಸಲಾವುದ್ದೀನ ಸೊಲ್ಲಾಪುರ ಎಂಬುವನಿಂದ ಟೆರೇಸ್ ಮೇಲೆ ಬೆಳೆದಿದ್ದ 217 ಗ್ರಾಂ ಗಾಂಜಾ ಗಿಡ, ಹಾಗೂ ಧಾರವಾಡ ಉಪನಗರ ಠಾಣೆ ವ್ಯಾಪ್ತಿಯ ತನ್ವೀರ ರಾಮದುರ್ಗ ಎಂಬುವನಿಂದ 113 ಗ್ರಾಂ ಗಾಂಜಾ ವಶಪಡಿಸಿಕೊಂಡು ಎನ್ಡಿಪಿಎಸ್ ಕಾನೂನು ಅಡಿ ಪ್ರಕರಣ ದಾಖಲಿಸಲಾಗಿದೆ.
ಅವಳಿ ನಗರವನ್ನು ಗಾಂಜಾ ಮುಕ್ತ ನಗರವನ್ನಾಗಿಸುವ ಗುರಿ ಹೊಂದಿದ್ದು, ಅದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ದಿನದ 24 ಗಂಟೆ ಗಾಂಜಾ ತಡೆಗಾಗಿಯೇ ಕೆಲಸ ಮಾಡಲಿದೆ. ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಮಾರಾಟ, ಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಅಂಥವರ ಬಗ್ಗೆ ಸಾರ್ವಜನಿಕರು ಗೌಪ್ಯವಾಗಿ ಮಾಹಿತಿ ನೀಡಬಹುದು ಎಂದು ಡಿಸಿಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ……